ಸಿಎಂರಿಂದ ಆಡಳಿತ ಯಂತ್ರ ದುರುಪಯೋಗ: ಉಡುಪಿ ಜಿಲ್ಲಾ ಜೆಡಿಎಸ್ ಆರೋಪ
ಉಡುಪಿ, ಜ.9: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಸಾಧನಾ ಸಮಾವೇಶದ ಹೆಸರಿನಲ್ಲಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತಿದ್ದಾರೆ. ಸಮಾವೇಶದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತಿದ್ದಾರೆ ಎಂದು ಜಾತ್ಯತೀತ ಜನತಾ ದಳದ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಚಾಲನೆ ನೀಡುವುದು, ನೂರಾರು ಕೋಟಿ ರೂ.ಪ್ಯಾಕೇಜ್ ಘೋಷಣೆ ಇವೆಲ್ಲಾ ಚುನಾವಣಾ ಗಿಮಿಕ್ ಆಗಿದೆ ಎಂದವರು ಆರೋಪಿಸಿದರು.
ಜನರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು. ಸಾದನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದ ಊಟ ತರಿಸಿಕೊಂಡಿರು ವುದನ್ನು ಟೀಕಿಸಿದ ಅವರು, ಜನರನ್ನು ತರಲು ನರ್ಮ್ ಹಾಗೂ ಸರಕಾರಿ ಬಸ್‌ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಸ್ ಇಲ್ಲವಾಗಿಸಿ ಸಮಸ್ಯೆ ಸೃಷ್ಟಿಸಿದ್ಧಾರೆ ಎಂದು ದೂರಿದರು.
ಇಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್‌ನ ಸೌಹಾರ್ದ ಸಮಾವೇಶವನ್ನು ಮಂಗಳೂರಿನ ಪ್ರಕ್ಷುಬ್ದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದೂಡಿದ್ದು, ಮುಂದಿನ ದಿನವನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಜಯಕುಮಾರ್ ಪರ್ಕಳ, ಎ.ಖಾದರ್ ಕುಂಜಾಲು, ಅನಿತಾ ಶೆಟ್ಟಿ, ಮನ್ಸೂರ್, ರವಿರಾಜ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.