×
Ad

ಪೋರ್ಜರಿ ಸಹಿ ಮಾಡಿ ಮೋಸ: ಮೂವರು ಆರೋಪಿಗಳಿಗೆ ಶಿಕ್ಷೆ

Update: 2018-01-09 21:40 IST

ಉಡುಪಿ, ಜ.9: ಪೋರ್ಜರಿ ಸಹಿ ಮಾಡಿ ವಂಚನೆ ಎಸಗಿರುವ ಮೂವರು ಆರೋಪಿಗಳಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜ.8ರಂದು ಆದೇಶ ನೀಡಿದೆ.

ಉಡುಪಿಯ ಸುಧರ್ಮ ಕುಂದರ, ಚಂದ್ರಕಾಂತ ಹಾಗೂ ಅಂಬಲಪಾಡಿಯ ರಮೇಶ ಎಂಬವರು ಶಿಕ್ಷೆಗೆ ಗುರಿಯಾದ ಆರೋಪಿಗಳು. 1998ರ ಡಿ.18ರಂದು ಉಡುಪಿಯ ಸುಂದರ ಮರಕಲ (73) ತನಗೆ ಸೇರಿದ ಸರ್ವೆ ನಂ.170/2, 241/11, 170/1ಎ, 170/14 ಮತ್ತು 170/15ರಲ್ಲಿರುವ ಜಮೀನನ್ನು ಅವರ ಅಕ್ಕನ ಮಗ ಸುಧರ್ಮ ಕುಂದರ್‌ಗೆ 73,700 ರೂ. ಹಣಕ್ಕೆ ಮಾರಾಟ ಮಾಡಿರುವುದಾಗಿ ಸುಧರ್ಮ ಕುಂದರ್ ನಕಲಿ ಕರಾರು ಪತ್ರ ತಯಾರಿಸಿದ್ದು, ಈ ಪತ್ರವನ್ನು ಚಂದ್ರಕಾಂತ ಮತ್ತು ರಮೇಶ ಎಂಬವರನ್ನು ಸಾಕ್ಷಿದಾರರನ್ನಾಗಿ ಬಳಸಿಕೊಂಡು ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸುಧರ್ಮ ಕುಂದ್ ಹೆಸರಿಗೆ ನೊಂದಾಯಿಸಿಕೊಂಡಿದ್ದನು.

ಈ ದಾಖಲೆ ಪತ್ರವನ್ನು ನೈಜ ಕ್ರಯ ಕರಾರು ಪತ್ರ ಎಂದು ನಂಬಿಸಿ ಆ ಮೂಲಕ ಸುಂದರ ಮರಕಲರ ಜಮೀನನ್ನು ಸುಧರ್ಮ ಕುಂದರ್ ತನ್ನ ಸ್ವಂತಕ್ಕೆ ಉಪಯೊಗಿಸಿ ತನ್ನ ಹೆಸರಿಗೆ ಖಾತೆ ಬದಲಾಯಿಸಿಕೊಂಡಿದ್ದನು. ಸುಂದರ ಮಕಲರ ಸಹಿಯನ್ನು ಪೋರ್ಜರಿ ಮಾಡಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಸಬ್ ಇನ್ಸ್‌ಪೆಕ್ಟರ್ ಸಿ.ಡಿ.ನಾಗರಾಜ ನಡೆಸಿ ದೋಷಾರೋಪಣೆ ಪಟ್ಟಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಮತ್ತು ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಮೂವರು ಆರೋಪಿ ಗಳಿಗೆ ಭಾ.ದಂ.ಸಂ. ಕಲಂ 423, 465, 468, 471, ಜೊತೆಗೆ 34 ರಡಿ 3 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ ಶಿಕ್ಷೆ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News