×
Ad

ಗಂಗೊಳ್ಳಿಯಲ್ಲಿ ಮತ್ತೊಂದು ಬೈಕಿಗೆ ಬೆಂಕಿ: ಕಿಡಿಗೇಡಿಗಳ ಕೃತ್ಯ

Update: 2018-01-09 21:59 IST

ಗಂಗೊಳ್ಳಿ, ಜ.9: ಕೋಮು ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ 4.30ರ ಸುಮಾರಿಗೆ ಮತ್ತೊಂದು ಬೈಕಿಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿರುವ ಘಟನೆ ವರದಿಯಾಗಿದೆ.

ರವಿವಾರ ತಡರಾತ್ರಿ ಗಂಗೊಳ್ಳಿ ಜಾಮೀಯ ಮಸೀದಿಯ ಹಿಂಬದಿಯ ಅಬ್ದುಲ್ ಮಜೀದ್ ಎಂಬವರ ಬೈಕಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣದ ಬೆನ್ನಲ್ಲೆ ಮತ್ತೊಂದು ಘಟನೆ ನಡೆದಿದೆ. ಇದಕ್ಕೂ ಕೆಲ ದಿನಗಳ ಹಿಂದೆ ಕಟ್ಟಡವೊಂದಕ್ಕೆ ಕಲ್ಲು ತೂರಾಟ ನಡೆಸಿ ಕಿಟಕಿಯ ಗಾಜುಗಳನ್ನು ಪುಡಿಗೈಯ್ಯಲಾಗಿತ್ತು. ಇದ ರಿಂದ ಗಂಗೊಳ್ಳಿಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದ್ದು, ಈ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪದ ಗೋಪಾಲ ಶೇರಿಗಾರ್ ಎಂಬವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿರುವ ಬದ್ರುದ್ದೀನ್ ಎಂಬವರ  ಬೈಕ್‌ಗೆ ಮಂಗಳವಾರ ಬೆಳಗಿನ ಜಾವ ಕಿಡಿಗೇಡಿಗಳು  ಬೆಂಕಿ ಹಾಕಿ ಪರಾರಿಯಾದರು. ಸುಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮನೆ ಮಾಲಕ ಗೋಪಾಲ ಶೇರಿಗಾರ್ ಹೊರಗೆ ಬಂದು ನೋಡಿದಾಗ ಬೈಕ್ ಉರಿಯುತ್ತಿರುವುದು ಕಂಡುಬಂತು.

ಕೂಡಲೇ ಅವರು ನೀರು ಹಾಕಿ ಬೆಂಕಿಯನ್ನು ನಂದಿಸಿದರು. ಇದರಿಂದ ಬೈಕ್ ಭಾಗಶಃ ಸುಟ್ಟು ಹೋಗಿದೆ. ಬದ್ರುದ್ದೀನ್ ಗಂಗೊಳ್ಳಿ ಮ್ಯಾಂಗ್ನಿಸ್ ರಸ್ತೆ ಯಲ್ಲಿ ಮೊಬೈಲ್ ಶಾಪ್ ಹೊಂದಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಇಂತಹ ಕೃತ್ಯಗಳನ್ನು ಖಂಡಿಸಿ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮುಸ್ಲಿಂ ವರ್ತಕರು ಅಂಗಡಿಗಳನ್ನು ಮುಚ್ಚಿ ಕೆಲಕಾಲ ಬಂದ್ ನಡೆಸಿದರು. ಎಸ್ಪಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಈ ವೇಳೆ ಸ್ಥಳದಲ್ಲಿ ನೆರೆದ ಗುಂಪನ್ನು ಪೊಲೀಸರು ಚದುರಿಸಿದರು. ಗಂಗೊಳ್ಳಿ ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಕುಂದಾಪುರ ಉಪ ಭಾಗದ ಡಿವೈಎಸ್‌ಪಿ ಪ್ರವೀಣ್ ನಾಯ್ಕ್, ಕುಂದಾಪುರ ಸಂಚಾರಿ ಠಾಣೆಯ ಎಸ್ಸೈ ಸುಬ್ಬಣ್ಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಗಂಗೊಳ್ಳಿಗೆ ಎಸ್ಪಿ ಭೇಟಿ

ಘಟನೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ ಗಂಗೊಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರವೇ ಪ್ರಕರಣವನ್ನು ಭೇದಿಸಲಾಗುವುದು. ಗಂಗೊಳ್ಳಿಯಲ್ಲಿ ಶಾಂತಿಯ ವಾತಾವರಣ ಇದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಗಂಗೊಳ್ಳಿ ಪರಿಸರದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ್ ನಿಂಬರಿಗಿ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News