ಜ.13-14: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ
ಮಂಗಳೂರು, ಜ.9: ಹಳೆಯಂಗಡಿಯ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜ.13 ಮತ್ತು 14ರಂದು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ ಎಂದು ಆಯೋಜಿಸಲಾಗಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಹೇಳಿದರು.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿಮಾತನಾಡಿದ ಅವರು ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾಟಗಳು ನಗರದ ಯು.ಎಸ್. ಮಲ್ಯ ಕ್ರೀಡಾಂಗಣ ಹಾಗೂ ಹಳೆಯಂಗಡಿ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ದೇಶದ ವಿವಿಧೆಡೆಯಿಂದ 200ಕ್ಕೂ ಅಧಿಕ ಬ್ಯಾಡ್ಮಿಂಟನ್ ಪಟುಗಳು ಭಾಗವಹಿಸುವರು. ವಿಜೇತರಿಗೆ ಡಬಲ್ಸ್‌ನಲ್ಲಿ ಪ್ರಥಮ 50 ಸಾವಿರ ರೂ. ನಗದು, ದ್ವಿತೀಯ 30 ಸಾವಿರ ರೂ. ನಗದು, ಸಿಂಗಲ್ಸ್‌ನಲ್ಲಿ ಪ್ರಥಮ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ. ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು. ಸೆಮಿಫೈನಲ್‌ನಲ್ಲಿ ಪರಾಜಿತರಿಗೆ ಕೂಡ ಅತ್ಯಾಕರ್ಷಕ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಗುವುದು ಎಂದರು.
ಜ.13ರಂದು ಬೆಳಗ್ಗೆ 9:30ಕ್ಕೆ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮತ್ತು ಜ.14ರಂದು ಸಂಜೆ 5:30ಕ್ಕೆ ನಡೆಯುವ ಸಮಾರೋಪದಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಪದಾಧಿಕಾರಿಗಳಾದ ಐವನ್ ಪಿಂಟೊ, ನಾಗಭೂಷಣ್ ರೆಡ್ಡಿ, ಪ್ರತಾಪ್ ಶೆಟ್ಟಿ, ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಅಶೋಕ್ ಪೂವಯ್ಯ ಉಪಸ್ಥಿತರಿದ್ದರು.