ಚಳಿಗಾಲದ ಒಲಿಂಪಿಕ್ಸ್‌ಗೆ ಉತ್ತರ ಕೊರಿಯ ಸೇನಾ ಉದ್ವಿಗ್ನತೆ ಕಡಿಮೆ ಮಾಡಲು ಮಾತುಕತೆ
ಸಿಯೋಲ್, ಜ. 9: ಮುಂದಿನ ತಿಂಗಳು ದಕ್ಷಿಣ ಕೊರಿಯದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ನಿಯೋಗವೊಂದನ್ನು ಕಳುಹಿಸಲು ಹಾಗೂ ಸೇನಾ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ದಕ್ಷಿಣ ಕೊರಿಯದೊಂದಿಗೆ ಮಾತುಕತೆ ನಡೆಸಲು ಉತ್ತರ ಕೊರಿಯ ಒಪ್ಪಿಕೊಂಡಿದೆ.
ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ಮಂಗಳವಾರ ಉಭಯ ದೇಶಗಳ ನಿಯೋಗಗಳ ನಡುವೆ ಗಡಿ ಗ್ರಾಮ ಪನ್‌ಮುಂಜೊಮ್‌ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಉತ್ತರ ಕೊರಿಯವು ಆಟಗಾರರು, ಪ್ರೋತ್ಸಾಹಕಾರರು, ಕಲಾ ತಂಡ, ಸಂದರ್ಶಕರ ಗುಂಪು, ಟೇಕ್ವಾಂಡೊ ಪ್ರದರ್ಶನ ತಂಡ ಮತ್ತು ಪತ್ರಕರ್ತರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೊಂದನ್ನು ದಕ್ಷಿಣ ಕೊರಿಯಕ್ಕೆ ಕಳುಹಿಸಲಿದೆ ಎಂದು ಮಾತುಕತೆಯ ಕೊನೆಯಲ್ಲಿ ನೀಡಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡು ಕೊರಿಯಗಳ ನಡುವೆ ಈಗ ನೆಲೆಸಿರುವ ಸೇನಾ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೇನಾ ಮಾತುಕತೆಗಳನ್ನು ನಡೆಸಲು ಮಾತುಕತೆಯಲ್ಲಿ ಒಪ್ಪಿಕೊಳ್ಳಲಾಗಿದೆ.
ಮಾತುಕತೆಗಳನ್ನು ಮೊದಲು ದಕ್ಷಿಣ ಕೊರಿಯ ಪ್ರಸ್ತಾಪಿಸಿತು ಎಂದು ದಕ್ಷಿಣ ಕೊರಿಯ ಏಕೀಕರಣ ಸಚಿವಾಲಯ ಹೇಳಿಕೆ ನೀಡಿದೆ.