×
Ad

ಜ.12: ಸಂತ ಆಗ್ನೆಸ್ ಕಾಲೇಜು ಶತಮಾನೋತ್ಸವ ಸಂಭ್ರಮಾಚರಣೆ

Update: 2018-01-09 23:08 IST

ಮಂಗಳೂರು, ಜ.9: ನಗರದ ಸಂತ ಆಗ್ನೆಸ್ ಕಾಲೇಜು ಶತಮಾನೋತ್ಸವ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮವು ಜ.12ರಂದು ಅಪರಾಹ್ನ 3:30ಕ್ಕೆ ಕಾಲೇಜಿನ ಪ್ರವೇಶದ್ವಾರ ಬಳಿ ನಡೆಯಲಿದೆ ಎಂದು ಕಾಲೇಜು ಉಪಪ್ರಾಂಶುಪಾಲೆ ಭಗಿನಿ ಡಾ. ವೆನಿಸಾ ತಿಳಿಸಿದರು.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮೇಯರ್ ಕವಿತಾ ಸನಿಲ್, ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಎಂ.ಒಲಿವಿಯಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಲಾಂಛನ ಅನಾವರಣ ಮತ್ತು ಆಗ್ನೆಸ್ ಹಳೆ ವಿದ್ಯಾರ್ಥಿ ಸಂಘದ ವೆಬ್‌ಸೈಟ್ ಬಿಡುಗಡೆಗೊಳ್ಳಲಿದೆ ಎಂದರು.

2020-21ನೇ ವರ್ಷ ಕಾಲೇಜಿನ ಇತಿಹಾಸದಲ್ಲಿ ಮೈಲಿಗಲ್ಲಾಗಿದ್ದು, ಕಾಲೇಜು ನೂರು ವರ್ಷ ಪೂರೈಸಲಿದೆ. ಆ ಹಿನ್ನೆಲೆಯಲ್ಲಿ ಶತಮಾನೋತ್ಸವದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಸಂಗೀತ ರಸಸಂಜೆ, ದೊಡ್ಡ ಮಟ್ಟದ ಹಬ್ಬ ಒಳಗೊಂಡಿದೆ. ಜ.14ರಂದು ನಗರದ ಸಿಟಿ ಸೆಂಟರ್, ೆರಂ ಫಿಝಾ ಮಾಲ್ ಮತ್ತಿತರ ಕಡೆ ಕಾಲೇಜು ವಿದ್ಯಾರ್ಥಿನಿಯರಿಂದ, ಸಿಬ್ಬಂದಿ ವರ್ಗ, ಹಿರಿಯ ನಾಗರಿಕರಿಂದ ಶತಮಾನೋತ್ಸವ ಪ್ರಚಾರ ಕಾರ್ಯಕ್ರಮ ನಡೆಯಲಿದೆ ಎಂದು ಭಗಿನಿ ಡಾ. ವೆನಿಸಾ ಹೇಳಿದರು.

ಶತಮಾನೋತ್ಸವ ನೆನಪಿನಲ್ಲಿ ಕಾಲೇಜಿನಲ್ಲಿ ಶತಮಾನೋತ್ಸವ ಸ್ಮಾರಕ ಕಟ್ಟಡ ನಿರ್ಮಿಸಲಾಗುತ್ತಿದೆ. ವಿಶೇಷ ಮಕ್ಕಳು ಹಾಗೂ ಅಂಗವಿಕಲರಿಗಾಗಿ ‘ವೆರೊನಿಕಾ ವಿಹಾರ್’ ಎಂಬ ವಸತಿಯುತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಹಳೆ ವಿದ್ಯಾರ್ಥಿನಿಯರು ಇದರಲ್ಲಿ ಕೈಜೋಡಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕಿ ಡಾ. ಮೀರಾ ಅರ್ಹಾನಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ದೇವಿಪ್ರಭಾ ಆಳ್ವ, ಹಳೆ ವಿದ್ಯಾರ್ಥಿನಿ ಸಂಘದ ಉಪಾಧ್ಯಕ್ಷೆ ಡಾ. ಸಂಚಿಯಾ, ವಿದ್ಯಾರ್ಥಿ ಸಂಘದ ನಾಯಕಿ ಮೃಣಾಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News