ಮಂಗಳೂರು: ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಯುವ ಕಾಂಗ್ರೆಸ್ ಮನವಿ
ಮಂಗಳೂರು, ಜ.10: ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಬಶೀರ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಪರ ಜಿಲ್ಲೆಯ ಯಾವುದೇ ವಕೀಲರು ವಕಾಲತ್ತು ನಡೆಸದಂತೆ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಲಾ ಗುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಈ ಹತ್ಯೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಮತೀಯ ಶಕ್ತಿಗಳು ಜಿಲ್ಲೆಯ ಶಾಂತಿ ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಇಬ್ಬರ ಹತ್ಯೆಯೂ ಅವರ ಮನೆಯವರಿಗೆ ತುಂಬಲಾರದ ನಷ್ಟವಾಗಿದ್ದು, ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಆರೋಪಿಗಳ ಪರ ಯಾರೂ ವಕಾಲತ್ತು ಮಾಡದಿರುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬಹುದು. ಹೀಗಾಗಿ ನಾವು ವಕೀಲರ ಸಂಘಕ್ಕೆ ಮನವಿ ಮಾಡಲಿದ್ದೇವೆ. ಜತೆಗೆ ಆರೋಪಿಗಳಿಗೆ ಕುಮ್ಮಕ್ಕು ನೀಡಿದವರನ್ನೂ ಬಯಲಿಗೆಳೆಯಲು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಉಳ್ಳಾಲದ ಟಾರ್ಗೆಟ್ ಗ್ರೂಪ್‌ನಲ್ಲಿ ಗುರುತಿಸಿಕೊಂಡಿರುವ ಇಲ್ಯಾಸ್ ಯುವ ಕಾಂಗ್ರೆಸ್‌ನ ಪದಾಧಿಕಾರಿಯಾಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಯಾಸ್ ಅವರು ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತು ಉಪಾಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ಪ್ರಕರಣಗಳಿರುವುದು ನಿಜ. ಅವರು ಅಪರಾಧಿ ಎಂದು ಸಾಬೀತಾದರೆ ಮಾತ್ರ ಅವರನ್ನು ಉಚ್ಚಾಟಿಸಬಹುದು. ಹಾಗಾಗಿ ಜಿಲ್ಲಾ ಯುವ ಕಾಂಗ್ರೆಸ್ ಏನೂ ಮಾಡುವಂತಿಲ್ಲ ಎಂದು ಮಿಥುನ್ ರೈ ಸ್ಪಷ್ಟಪಡಿಸಿದರು.
ಹಿ. ಜಾ. ವೇದಿಕೆಯ ಭರತ್ ಅಗರಮೇಲು ತನ್ನನ್ನು ಯಾರೋ ಹತ್ಯೆ ಮಾಡಲು ಬಂದಿದ್ದಾರೆ ಎಂದು ಸುಳ್ಳು ಹೇಳಿ ಮತ್ತೆ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ. ಯುವಜನಾಂಗ ಜಿಲ್ಲೆಯ ಶಾಂತಿ-ಸಾಮರಸ್ಯಕ್ಕೆ ಶ್ರಮಿಸಬೇಕು ಎಂದು ಮಿಥುನ್ ರೈ ಮನವಿ ಮಾಡಿದರು.
ಕಾರ್ಪೊರೇಟರ್ ದೀಪಕ್ ಪೂಜಾರಿ ಮಾತನಾಡಿ, ಹತ್ಯೆಯಾದ ಬಶೀರ್ ಅಮಾಯಕರಾಗಿದ್ದು, ಯಾರ ತಂಟೆಗೂ ಹೋದವರಲ್ಲ. ಅವರು ನನ್ನ ಬಾಲ್ಯದ ಗೆಳೆಯರಾಗಿದ್ದು, ನಾವು ಪ್ರಾಥಮಿಕ ಶಿಕ್ಷಣವನ್ನು ಜತೆಯಾಗಿ ಪಡೆದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಲುಕ್ಮಾನ್, ರಮಾನಂದ ಪೂಜಾರಿ, ಸುಹೈಲ್ ಕಂದಕ್, ಕಿರಣ್ ಬುಡ್ಲೆಗುತ್ತು, ಪ್ರಸಾದ್ ಮಲ್ಲಿ ಉಪಸ್ಥಿತರಿದ್ದರು.