×
Ad

ಕುಡಿತ ಆರೋಗ್ಯಕ್ಕೆ ಒಳ್ಳೆಯದೆಂಬ ಸುಳ್ಳನ್ನು ನಂಬಬೇಡಿ: ಡಾ.ಭಂಡಾರಿ

Update: 2018-01-10 20:43 IST

ಉಡುಪಿ, ಜ.10: ಮದ್ಯಪಾನ ಹೃದಯ ಕಾಯಿಲೆಗಳಿಗೆ ಉತ್ತಮ ಔಷಧ ಎಂಬ ತಪ್ಪು ಕಲ್ಪನೆ ಜನಸಾಮಾನ್ಯರಲ್ಲಿದೆ. ಕುಡಿತದ ಚಟದಿಂದ ಹೃದಯ ಕಾಯಿಲೆಗಳು ಬರುವ ಮೊದಲೇ ಅವರು ಲೀವರ್ ಸಮಸ್ಯೆಗೆ ತುತ್ತಾಗಿ ಮೃತ ಪಡುತ್ತಾರೆ. ಆದುದರಿಂದ ದಿನ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ದೊಡ್ಡ ಸುಳ್ಳನ್ನು ಯಾರು ಕೂಡ ನಂಬಬಾರದು ಎಂದು ಉಡುಪಿ ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಮನೋ ವೈದ್ಯ ಡಾ.ಪಿ.ವಿ. ಭಂಡಾರಿ ತಿಳಿಸಿದ್ದಾರೆ.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯ ಕೀಯ ಸಂಘ ಉಡುಪಿ- ಕರಾವಳಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಉಡುಪಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ 25ನೆ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮದ್ಯಪಾನದ ಚಟದಿಂದ ಮೊದಲು ಸಮಸ್ಯೆಯಾಗುವುದು ಲೀವರ್‌ಗೆ. ಅತಿ ಯಾದ ಸಕ್ಕರೆ ಸೇವನೆ ಮತ್ತು ಮದ್ಯಪಾನ ಚಟವು ಲೀವರ್‌ಗೆ ದೊಡ್ಡ ಹೊಡೆತ ಆಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡ 47 ಮಂದಿಯ ಪೈಕಿ 30ಕ್ಕೂ ಅಧಿಕ ಮಂದಿ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಅಪರಾಧ ಕೃತ್ಯಗಳಿಗೆ ಕುಡಿತವೇ ಕಾರಣ. ಕುಡಿತದಿಂದ ಕೇವಲ ವ್ಯಕ್ತಿ ಮಾತ್ರವಲ್ಲದೆ, ಅವರ ಕುಟುಂಬ ಹಾಗೂ ಇಡೀ ಸಮಾಜ ತೊಂದರೆ ಅನುಭವಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ.ದೀಪಕ್ ಮಲ್ಯ, ಆಡಳಿತಾಧಿ ಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿಗಳಾದ ಅಶ್ವಿನ್ ಮತ್ತು ನಾಗೇಶ್ ಶೆಟ್ಟಿಗಾ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಆಪ್ತ ಸಮಾಲೋಚಕ ಗಿರೀಶ್ ಸ್ವಾಗತಿಸಿದರು. ಪಂಚಮಿ ಕಾರ್ಯಕ್ರಮದ ವರದಿ ವಾಚಿಸಿದರು. ಜ್ಯೋತಿ ವಂದಿಸಿದರು. ಸುಚಿತ್ರಾ ಮತ್ತು ದೀಪಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News