ದಾನಮ್ಮ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಮನವಿ
Update: 2018-01-10 20:44 IST
ಕುಂದಾಪುರ, ಜ.10: ವಿಜಯಪುರದ ವಿದ್ಯಾರ್ಥಿನಿ ದಾನಮ್ಮಳ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮತ್ತು ಆಕೆಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಕುಂದಾಪುರ ದಲಿತ ಹಕ್ಕುಗಳ ಸಮಿತಿಯು ಕುಂದಾಪುರ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗೆ ಇಂದು ಮನವಿ ಸಲ್ಲಿಸಿತು.
ದಾನಮ್ಮಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ತಪಿತಸ್ಥತರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದಾನಮ್ಮಳ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು. ಅಲ್ಲದೇ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಬೇಕು. ರಾಜ್ಯದ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಮಿತಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ರವಿ ಎಂ., ಅರುಣ್ ಕುಮಾರ್ ಗಂಗೊಳ್ಳಿ, ನಾಗರತ್ನ ನಾಡ, ಮಹಾಬಲ ವಡೇರಹೋಬಳಿ, ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಗಣಪ, ಆನಂದ, ಶ್ಯಾಮಲ ಮೊದಲಾದವರು ಉಪಸ್ಥಿತರಿದ್ದರು.