ಉಡುಪಿ: ಲೈಟ್ ಮೀನುಗಾರಿಕೆ ನಿಷೇಧಿಸದಂತೆ ಆಗ್ರಹಿಸಿ ಡಿಸಿಗೆ ಮನವಿ
ಉಡುಪಿ, ಜ.10: ಕರ್ನಾಟಕ ರಾಜ್ಯದಲ್ಲಿ ಲೈಟ್ ಮೀನುಗಾರಿಕೆ ನಿಷೇಧಿಸ ದಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ ಮಂಗಳೂರು, ಉಡುಪಿ, ಕಾರವಾರ ಇದರ ನೇತೃತ್ವದಲ್ಲಿ ನೂರಾರು ಮೀನು ಗಾರರು ಇಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಎಲ್ಲ 9 ಬಂದರುಗಳಲ್ಲಿ 700ಕ್ಕಿಂತ ಅಧಿಕ ಪರ್ಸಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದ್ದು, ಒಂದು ಬೋಟುಗಳಲ್ಲಿ 35ರಿಂದ 40ರಂತೆ ಒಟ್ಟು 28ಸಾವಿರಕ್ಕಿಂತಲೂ ಅಧಿಕ ಮಂದಿ ಈ ಮೀನುಗಾರಿಕೆಯನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ. ಹೆಲೋಜಿನ್ ಲೈಟ್ ಬಳಸಿ ಮೀನುಗಾರಿಕೆ ನಡೆ ಸಲು ಕೇಂದ್ರ ಸರಕಾರ ಎರಡು ವರ್ಷದಿಂದ ಅನುಮತಿ ನೀಡಿದೆ. ಇದೀಗ ಕೇಂದ್ರ ಸರಕಾರ ಈ ಮೀನುಗಾರಿಕೆಯ ಸಾಧಕ ಬಾಧಕಗಳನ್ನು ಅರಿಯದೆ ಕರ್ನಾಟಕದಲ್ಲಿ ಲೈಟು ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಆದೇಶದಿಂದ ಪರ್ಸಿನ್ ಮೀನುಗಾರಿಕೆಯನ್ನು ಅವಲಂಬಿಸಿರುವ ಎಲ್ಲರು ಕಷ್ಟಕ್ಕೆ ಒಳಗಾಗಿದ್ದಾರೆ. ಈ ಮೀನುಗಾರಿಕೆಗೆ ಅನುಮತಿ ನೀಡಿದಾಗ ಮೀನುಗಾರರು ಇದಕ್ಕಾಗಿ 30ರಿಂದ 35ಲಕ್ಷ ರೂ.ವರೆಗೆ ಬ್ಯಾಂಕ್ ಸಾಲ ಮಾಡಿ ಸಲಕರಣೆಗಳನ್ನು ಖರೀದಿಸಿದ್ದಾರೆ. ಈ ಮೀನುಗಾರಿಕೆಯನ್ನು ಇತರ ಮೀನು ಗಾರರಿಗೆ ತೊಂದರೆಯಾಗದಂತೆ 12ನಾಟಿಕಲ್ ಮೈಲು ದೂರದ ಆಳ ಸಮುದ್ರ ದಲ್ಲಿ ಮಾಡಲಾಗುತ್ತಿದೆ. ಇಲ್ಲಿ 45ಎಂ.ಎಂ. ಬಲೆಯನ್ನು ಬಳಸುವುದರಿಂದ ಸಣ್ಣ ಮೀನುಗಳು ನಾಶವಾಗುತ್ತಿಲ್ಲ ಎಂದರು.
ಈ ಮೀನುಗಾರಿಕೆಯನ್ನು ನಿಷೇಧಿಸಿರುವುದರಿಂದ ಕಳೆದ ಹಲವು ವರ್ಷ ಗಳಿಂದ ಪರ್ಸಿನ್ ಮೀನುಗಾರಿಕೆಯನ್ನು ನಂಬಿರುವ ಸಾವಿರಾರು ಮೀನು ಗಾರರು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪರಿಸ್ಥಿತಿ ಎದುರಾಗಬಹುದು. ಆದುದರಿಂದ ಹೆಲೋಜಿನ್ ಲೈಟ್ ಬಳಸುವ ನಿಷೇಧ ವನ್ನು ತೆಗೆದು ನ್ಯಾಯ ಒದಗಿಸಬೇಕೆಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ, ಪ್ರಧಾನ ಕಾರ್ಯದರ್ಶಿ ರಮೇಶ್ ಕುಂದರ್ ಗಂಗೊಳ್ಳಿ, ಉಪಾಧ್ಯಕ್ಷ ನವೀನ್ ಬಂಗೇರ ಮಂಗಳೂರು, ಕೃಷ್ಣ ಎಸ್.ಸುವರ್ಣ, ಅಣ್ಣಪ್ಪ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.