×
Ad

ಆಳಸಮುದ್ರ ಟ್ರಾಲ್‌ಬೋಟ್ ಮೀನುಗಾರರಿಂದ ಪ್ರತಿಭಟನೆ: ಇಲಾಖೆಗೆ ಮುತ್ತಿಗೆ, ಗೇಟಿಗೆ ಬೀಗ

Update: 2018-01-10 21:53 IST

ಮಲ್ಪೆ, ಜ.10: ಕೇಂದ್ರ ಹಾಗೂ ರಾಜ್ಯ ಸರಕಾರ ಅವೈಜ್ಞಾನಿಕ ಮೀನು ಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುವುದನ್ನು ಉಳಿದ ರಾಜ್ಯ ಹಾಗೂ ಜಿಲ್ಲೆಗಳಂತೆ ಉಡುಪಿಯಲ್ಲೂ ಕಟ್ಟನಿಟ್ಟಾಗಿ ಆನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮಲ್ಪೆ ಆಳ ಸಮುದ್ರ ಟ್ರಾಲ್ ಬೋಟ್ ಮೀನುಗಾರರ ಸಂಘದ ನೇತೃತ್ವದಲ್ಲಿ ಮೀನುಗಾರರು ಇಂದು ಮಲ್ಪೆ ಬಂದರಿನೊಳಗಿರುವ ಮೀನುಗಾರಿಕಾ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರಲ್ಲದೇ, ಸಿಬ್ಬಂದಿಗಳು ಕಚೇರಿ ಪ್ರವೇಶಿಸದಂತೆ ಗೇಟಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.

ಮಲ್ಪೆ ಆಳಸಮುದ್ರ ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದಲೇ ಗೇಟಿನೆದುರು ಪ್ರತಿಭಟನೆ ನಡೆಸಿದ ಭಾರೀ ಸಂಖ್ಯೆಯ ಮೀನುಗಾರರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಿದ್ದರೂ, ಜಿಲ್ಲೆಯಲ್ಲಿ ಕಾನೂನನ್ನು ಅನುಷ್ಠಾನಗೊಳಿಸಲು ಮೀನುಗಾರಿಕಾ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರಿಕಾ ಇಲಾಖೆಯೊಂದಿಗೆ ಪೊಲೀಸ್ ಇಲಾಖೆ ಹಾಗೂ ಕರಾವಳಿ ಕಾವಲು ಪಡೆಯ ಕಾರ್ಯವೈಖರಿಯ ಬಗ್ಗೆಯೂ ಮೀನುಗಾರರು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು. ಮೀನುಗಾರಿಕಾ ಇಲಾಖೆಯ ಡಿಡಿ ತಕ್ಷಣವೇ ಇಲ್ಲಿಗೆ ಬಂದು ಅವೈಜ್ಞಾನಿಕ ಮೀನುಗಾರಿಕೆಗಳಾದ ಬೆಳಕು ಕೇಂದ್ರಿತ ಮೀನುಗಾರಿಕೆ (ಲೈಟ್ ಫಿಶಿಂಗ್), ಬುಲ್‌ಟ್ರಾಲ್ ಮೀನುಗಾರಿಕೆಯನ್ನು ತಕ್ಷಣವೇ ನಿಲ್ಲಿಸಲು ಕ್ರಮಕೈಗೊಳ್ಳುವ ಭರವಸೆ ನೀಡುವವರೆಗೆ ತಾವು ಇಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದರು.

ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಕರಾವಳಿ ಕಾವಲು ಪಡೆಯ ಜೈಶಂಕರ್ ಅವರು ಸ್ಥಳಕ್ಕೆ ಬಂದು ಮೀನುಗಾರರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರೂ ಮೀನುಗಾರರು ಬಗ್ಗಲಿಲ್ಲ. ಪೊಲೀಸ್ ಅಧಿಕಾರಿ ಗಳೊಂದಿಗೆ ಬಿರುಸಿನ ವಾಗ್ವಾದ ನಡೆಸಿದ ಅವರು ಎರಡೂ ಇಲಾಖೆಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಯಕುಮಾರ್ ಅವರು ಡಿಡಿಯ ಪರವಾಗಿ ಸ್ಥಳಕ್ಕೆ ಬಂದು ಮೀನುಗಾರರೊಂದಿಗೆ ಮಾತನಾಡಿದರೂ ಆಕ್ರೋಶ ಕಡಿಮೆಯಾಗಲಿಲ್ಲ. ಲೈಟ್ ಫಿಶಿಂಗ್ ನಿಲ್ಲಿಸಲು ನಾವು ಎರಡು ತಿಂಗಳಿನಿಂದ ಮನವಿ ಸಲ್ಲಿಸಿ ಒತ್ತಾಯಿಸುತಿದ್ದರೂ ಅದಿನ್ನೂ ಅನುಷ್ಠಾನಗೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಹಾಗಿದ್ದರೆ ಅನುಷ್ಠಾನಗೊಳಿಸಿ, ಬಡ ಮೀನುಗಾರರ ಹಿತಾಸಕ್ತಿ ಕಾಪಾಡುವವರು ಯಾರು ಎಂದವರು ಸಿಟ್ಟಿನಿಂದ ಪ್ರಶ್ನಿಸಿದರು.

ನಮ್ಮ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕಳೆದ ಡಿ.20ರಂದೇ ಲೈಟ್ ಫಿಶಿಂಗ್ ನಿಷೇಧವನ್ನು ಅನುಷ್ಠಾನಗೊಳಿಸು ವಂತೆ ಮೀನುಗಾರಿಕಾ ಇಲಾಖೆಗೆ ಆದೇಶ ನೀಡಿದ್ದಾರೆ. ಆದರೆ ಅದನ್ನು ಈವರೆಗೆ ಜಾರಿಗೊಳಿಸಿಲ್ಲ. ಇಂದು ಸಹ ಪರ್ಶಿನ್ ಬೋಟಿನವರು ಬೆಳಕಿನ ವ್ಯವಸ್ಥೆಯೊಂದಿಗೆ ಮೀನುಗಾರಿಕೆಗೆ ತೆರಳಲು ರೆಡಿಯಾಗಿದ್ದಾರೆ ಎಂದು ಅವರು ದೂರಿದರು.

ಹೈವೋಲ್ಟೇಜ್ ಹೆಲೋಜಿನ್ ಲೈಟ್ಸ್ ಮೂಲಕ ನಡೆಸುವ ಅವೈಜ್ಞಾನಿಕ ಲೈಟ್ ಫಿಶಿಂಗ್‌ನಿಂದ ಮೀನಿನ ಸಂತತಿಯೇ ನಾಶವಾಗುತ್ತಿವೆ. ಕರ್ನಾಟಕ ಕರಾವಳಿ ಯಲ್ಲಿ ತೀವ್ರವಾದ ಮೀನಿನ ಕ್ಷಾಮ ಈಗಾಗಲೇ ಕಾಣಿಸಿಕೊಂಡಿದೆ. ಹೀಗಾದರೆ ಮುಂದಿನ ಪೀಳಿಗೆಗೆ ಮೀನೇ ನೋಡಲು ಸಿಗದು. ಅದನ್ನೂ ನಾವು ವಿದೇಶ ದಿಂದ ಆಮದು ಮಾಡಿಕೊಳ್ಳುವ ಕಾಲಬರಬಹುದು. ನಮ್ಮಂಥ ಬಡ ಮೀನುಗಾರರ ಬದುಕೇ ಮೀನುಗಾರಿಕೆ ಮೇಲೆ ನಿಂತಿದೆ. ಈಗ ಅದು ಸಹ ತೊಂದರೆಗೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ಆಕ್ರೋಶ ತಣಿಸಲು ಮುಂದಾದ ಜಯಕುಮಾರ್, ಜಿಲ್ಲಾಧಿಕಾರಿ ಅವರ ಆದೇಶದಂತೆ ಇಲಾಖೆಯಿಂದ 49 ಬೋಟುಗಳಿಗೆ ನೋಟೀಸು ನೀಡಲಾಗಿದೆ. ಅವರಿಗೆ ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಅವರ ಉತ್ತರ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ನೋಟೀಸಿನ ಅವಧಿ ಇಂದಿಗೆ ಮುಗಿದಿದೆ. ನಾಳೆಯಿಂದಲೇ ಅದನ್ನು ನಿಷೇಧಿಸುವ ಭರವಸೆ ನೀಡಿ ಎಂದು ಮೀನುಗಾರರು ಪಟ್ಟು ಹಿಡಿದರು.

ಅಧಿಕಾರಿ ಸ್ಪಷ್ಟ ಭರವಸೆ ನೀಡಲು ಮೀನಮೇಷ ಎಣಿಸಿದಾಗ, ಮೀನುಗಾರಿಕಾ ಡಿಡಿ ಅಥವಾ ಡಿಸಿ ಅವರೇ ಇಲ್ಲಿಗೆ ಬಂದು ನಮಗೆ ಸ್ಪಷ್ಟ ಭರವಸೆ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ. ರಸ್ತೆಯಲ್ಲೇ ಕುಳಿತು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

ಕೊನೆಗೆ ಡಿಡಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು ಸಿಓಡಿ ತನಿಖೆಯಲ್ಲಿರುವುದರಿಂದ ಬರಲು ಅಸಾಧ್ಯ ಎಂಬ ಮಾಹಿತಿ ನೀಡಿ ದರು. ಬಳಿಕ ಅವರೊಳಗೆ ಚರ್ಚೆ ನಡೆದು ಕೊನೆಗೆ ನಾಳೆ ಬೆಳಗ್ಗೆ ಮತ್ತೆ ಪ್ರತಿಭಟನೆ ಮುಂದುವರಿಸಿ, ಡಿಡಿ ಬಂದು ಮುಂದಿನ ಕ್ರಮದ ಆಶ್ವಾಸನೆ ನೀಡುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲಿ ನಿರ್ಧರಿಸಿ ಇಂದಿನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲು ಒಪ್ಪಿಕೊಂಡರು.

ಆದೇಶದ ಪಾಲನೆಯಾಗದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವ ಘೋಷಣೆಯನ್ನೂ ಮಾಡಿದರು. ಇಂದಿನ ಮುಷ್ಕರದಲ್ಲಿ ಕಾರ್ಯದರ್ಶಿ ಭುವನೇಶ್ ಕೋಟ್ಯಾನ್, ಮಲ್ಪೆ ಆಳ ಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಕರುಣಾಕರ ಸಾಲ್ಯಾನ್, ಸಂಘದ ಮಾಜಿ ಅಧ್ಯಕ್ಷ ವಿಠಲ ಕರ್ಕೇರ, ರಾಮ ಅಮೀನ್ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News