×
Ad

ಮೇರಮಜಲಿನ ದಲಿತ ಬಾಲಕಿ ಇನ್ನೂ ನಾಪತ್ತೆ

Update: 2018-01-10 22:27 IST

ಬಂಟ್ವಾಳ, ಜ.9: ಮುಸ್ಲಿಮ್ ಯುವಕನೋರ್ವನಲ್ಲಿ ಮಾತನಾಡುವುದನ್ನು ಆಕ್ಷೇಪಿಸಿ ದಲಿತ ಕುಟುಂಬದ ಮಹಿಳೆಯೊಬ್ಬರ ಮನೆಗೆ ತೆರಳಿದ ಸಂಘ ಪರಿವಾರದ ಕಾರ್ಯಕರ್ತರು ಬೆದರಿಕೆ ಒಡ್ಡಿದ ಬಳಿಕ ನಾಪತ್ತೆಯಾಗಿರುವ ತಾಲೂಕಿನ ಮೇರಮಜಲಿನ ದಲಿತ ಬಾಲಕಿ ಬುಧವಾರ ಸಂಜೆಯವರೆಗೂ ಪತ್ತೆಯಾಗಿಲ್ಲ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ರವಿವಾರ ರಾತ್ರಿ ಸಂಘ ಪರಿವಾರಕ್ಕೆ ಸೇರಿದವರೆನ್ನಲಾದ ಸುಮಾರು 10 ಮಂದಿಯ ತಂಡವು ಮಹಿಳೆಯ ಮನೆಗೆ ಹೋಗಿ ನಿಮ್ಮ ಮಗಳು ಮುಸ್ಲಿಮ್ ಯುವಕನೋರ್ವನಲ್ಲಿ ಮಾತನಾಡುತ್ತಿದ್ದು, ಇದನ್ನು ನಿಲ್ಲಿಸಬೇಕು. ಒಂದು ವೇಳೆ ಇದು ಮುಂದುವರಿಸಿದರೆ ಊರಿಂದ ಹೊರಹೋಗಬೇಕು ಎಂದು ಬೆದರಿಕೆ ಹಾಕಿದೆ ಎಂದು ಆರೋಪಿಸಲಾಗಿದೆ.

ಬೆದರಿಕೆಯಿಂದ ಬೇಸತ್ತ ಬಾಲಕಿ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾಗಿರುವ ಬಾಲಕಿಗೆ ಯಾವುದೇ ಮುಸ್ಲಿಮ್ ಯುವಕರು ಸ್ನೇಹವಿರಲಿಲ್ಲ. ಆರೋಪಿಗಳು ದುರುದ್ದೇಶದಿಂದ ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಹೆದರಿಕೆಯೇ ಬಾಲಕಿ ನಾಪತ್ತೆಯಾಗಿರುವ ಮಾಹಿತಿ ತನಿಖಾ ತಂಡಕ್ಕೆ ದೊರಕಿದೆ. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ಬಾಲಕಿಯ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇಬ್ಬರ ಬಂಧನ; ಮುಂದುವರಿದ ತನಿಖೆ

ಬಾಲಕಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಉಮೇಶ್, ರಮೇಶ್ ಎಂಬವರನ್ನು ಬಂಧಿಸಿದ್ದಾರೆ. ರಮೇಶ್ ಸಹೋದರ ರಾಜೇಶ್ ಸಹಿತ ಪ್ರಕರಣದಲ್ಲಿ ಭಾಗಿಯಾಗಿರುವ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಶೋಧ ಮುಂದುವರಿದಿದೆ. ಆರೋಪಿಗಳು ಬಜರಂಗದಳ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಲ್ಬರ್ಗ ಮೂಲದ ಈ ದಲಿತ ಕುಟುಂಬ ಕೆಲಸಕ್ಕಾಗಿ 8 ವರ್ಷಗಳಿಂದ ಮೆರಮಜಲಿನ ಕುಟ್ಟಿಕಲ ಎಂಬಲ್ಲಿ ವಾಸವಾಗಿದೆ. ಬಾಲಕಿಯ ತಂದೆ ಕಲ್ಲು ಕ್ವಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಅಬ್ಬೆಟ್ಟುವಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲಕಿ ಸ್ಥಳೀಯ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News