ಟ್ರಂಪ್ ಯೋಜನೆಗೆ ನ್ಯಾಯಾಲಯ ತಡೆ
ಸ್ಯಾನ್‌ಫ್ರಾನ್ಸಿಸ್ಕೊ, ಜ. 10: ಹೆತ್ತವರು ಅಕ್ರಮವಾಗಿ ಅಮೆರಿಕಕ್ಕೆ ಕರೆತಂದಿರುವ ಮಕ್ಕಳನ್ನು ಗಡಿಪಾರುಗೊಳಿಸುವ ಯೋಜನೆಯನ್ನು ಅಮೆರಿಕದ ನ್ಯಾಯಾಧೀಶರೊಬ್ಬರು ಮಂಗಳವಾರ ತಡೆಹಿಡಿದಿದ್ದಾರೆ.
ಡೆಫರ್ಡ್ ಆ್ಯಕ್ಷನ್ ಫಾರ್ ಚೈಲ್ಡ್‌ಹುಡ್ ಅರೈವಲ್ಸ್ (ಡಿಎಸಿಎ) ಎಂಬ ಯೋಜನೆಯನ್ನು ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟಂಬರ್‌ನಲ್ಲಿ ನಿರ್ಧರಿಸಿದ್ದರು.
ಟ್ರಂಪ್‌ರ ಈ ನಿರ್ಧಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ಮೊಕದ್ದಮೆಗಳು ಇತ್ಯರ್ಥಗೊಳ್ಳುವವರೆಗೆ ಯೋಜನೆ ಮುಂದುವರಿಯಬೇಕು ಎಂದು ಸ್ಯಾನ್‌ಫ್ರಾನ್ಸಿಸ್ಕೊದ ಜಿಲ್ಲಾ ನ್ಯಾಯಾಧೀಶ ವಿಲಿಯಮ್ ಅಲ್‌ಸಪ್ ಮಂಗಳವಾರ ತೀರ್ಪು ನೀಡಿದರು.
ಡಿಎಸಿಎ ಯೋಜನೆಯು ಅಮೆರಿಕದಲ್ಲಿರುವ ಸುಮಾರು 8 ಲಕ್ಷ ಯುವಕರಿಗೆ ಕಾನೂನುಬದ್ಧವಾಗಿ ಅಮೆರಿಕದಲ್ಲಿರಲು ಹಾಗೂ ಕೆಲಸ ಮಾಡಲು ಅವಕಾಶ ನೀಡುತ್ತದೆ. ಈ ಯೋಜನೆಯನ್ನು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ಜಾರಿಗೆ ತಂದಿದ್ದರು.
‘ಕನಸುಗಾರರು’ ಎಂದು ಕರೆಯಲ್ಪಡುವ ಡಿಎಸಿಎ ಫಲಾನುಭವಿಗಳನ್ನು ರಕ್ಷಿಸುವಂತೆ ಕೋರಿ ಹಲವಾರು ರಾಜ್ಯಗಳು, ಸಂಘಟನೆಗಳು ಮತ್ತು ವ್ಯಕ್ತಿಗಳು ನ್ಯಾಯಾಲಯಗಳ ಮೆಟ್ಟಿಲೇರಿದ್ದರು.
ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ: ಟ್ರಂಪ್ ಇಂಗಿತ
ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮುಂದಿಟ್ಟಿದ್ದಾರೆ.
‘ಅತ್ಯುನ್ನತ ಹಿನ್ನೆಲೆ ಹೊಂದಿರುವ’ ಜನರಿಗೆ ಮಾತ್ರ ಅಮೆರಿಕ ಪ್ರವೇಶಿಸಲು ನಾವು ಅನುಮತಿ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಸಂಸತ್ತಿನಲ್ಲಿ ಮಂಡನೆಯಾಗುವ ಯಾವುದೇ ಮಸೂದೆಗೆ ‘ಅರ್ಹತೆ’ ಎಂಬ ಪದವನ್ನು ಸೇರಿಸಲು ನಾನು ಇಚ್ಛಿಸುತ್ತೇನೆ. ಯಾಕೆಂದರೆ, ಕೆನಡ ಮತ್ತು ಆಸ್ಟ್ರೇಲಿಯಗಳಲ್ಲಿ ಇರುವಂತೆ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯೊಂದನ್ನು ನಾವೂ ಹೊಂದಬೇಕು ಎಂದು ನನಗನಿಸುತ್ತದೆ. ಹಾಗೆ ಆದರೆ, ಈಗ ನಾವು ಏನು ಮಾಡುತ್ತಿದ್ದೇವೆಯೋ ಅದಕ್ಕೆ ವಿರುದ್ಧವಾಗಿ ಅತ್ಯುತ್ತಮ ಹಿನ್ನೆಲೆ ಇರುವ ಜನರು ಅಮೆರಿಕಕ್ಕೆ ಬರುತ್ತಾರೆ’’ ಎಂದು ಶ್ವೇತಭವನದಲ್ಲಿ ಸಂಸದರ ತಂಡವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.