×
Ad

ಜ.11ರಿಂದ ತುಂಬೆ ಡ್ಯಾಂನಲ್ಲಿ 6 ಮೀಟರ್ ನೀರು ನಿಲುಗಡೆ: ಮೇಯರ್ ಕವಿತಾ ಸನಿಲ್

Update: 2018-01-10 23:17 IST

ಮಂಗಳೂರು, ಜ.10: ಮನಪಾ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಜ.11ರಿಂದ 6 ಮೀಟರ್ ನೀರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಬುಧವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು 10 ತಿಂಗಳ ಹಿಂದೆ ನಾನು ಮೇಯರ್ ಆಗಿ ಅಧಿಕಾರ ವಹಿಸಿಕೊಂಡಾಗ ಮಂಗಳೂರಿಗೆ ನೀರು ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಆವಾಗ ತುಂಬೆಯಲ್ಲಿ ಕೇವಲ 3.38 ಮೀಟರ್ ಮಾತ್ರ ನೀರು ನಿಲುಗಡೆಯಾಗುತ್ತಿತ್ತು. ಬಳಿಕ ಅದನ್ನು 5 ಮೀಟರ್‌ಗೆ ಏರಿಸಲಾಯಿತು. ಆವಾಗ ಸುಮಾರು 26 ಮಂದಿಯ ಹಲವು ಎಕರೆ ಜಮೀನು ಮುಳುಗಡೆಯಾಗಿತ್ತು. ಸಂತ್ರಸ್ತರಿಗೆ 7 ಕೋ.ರೂ. ಪರಿಹಾರವು ಸರಕಾರ ಬಿಡುಗಡೆಗೊಳಿಸಿದ್ದು, ಹೆಚ್ಚಿನವರಿಗೆ ಬಿಡುಗಡೆ ಮಾಡಲಾಗಿದೆ. ದಾಖಲೆಪತ್ರ ಸರಿ ಇಲ್ಲದವರಿಗೆ ಪರಿಹಾರ ನೀಡಲು ಸ್ವಲ್ಪ ವಿಳಂಬವಾಗಿದೆ ಎಂದರು.

ಮೇಯರ್ ಆದಾಗಲೇ ಈ ನೀರಿನ ಮಟ್ಟವನ್ನು 6 ಮೀಟರ್‌ಗೆ ಏರಿಸಲು ಉದ್ದೇಶಿಸಿದ್ದೆ. ಇದೀಗ ಆ ಕನಸು ನನಸಾಗುತ್ತಿದೆ. ಜ.10ರಿಂದ 6 ಮೀಟರ್ ನೀರು ನಿಲುಗಡೆಯಾಗಲಿದ್ದು, ಇದಕ್ಕಾಗಿ ಬಿ. ಮೂಡಾ, ಸಜಿಪ ಮುನ್ನೂರು, ಪಾಣೆಮಂಗಳೂರು ಗ್ರಾಮಗಳ 37 ಕುಟುಂಬಗಳ 50.88 ಎಕರೆ ಜಮೀನು ಮುಳುಗಡೆಯಾಗಲಿದೆ. ಈ ಸಂತ್ರಸ್ತರಿಗೆ ಪರಿಹಾರ ಕೊಡಲು ಸುಮಾರು 40 ಕೋ.ರೂ. ಬೇಕಾಗಬಹುದು. ಅದಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಮನವಿ ಮಾಡಲಾಗುವುದು. ಸದ್ಯ ವಾರ್ಷಿಕ 19 ಲಕ್ಷ ರೂ. ನೆಲೆ ಬಾಡಿಗೆ ನೀಡಲಾಗುವುದು ಎಂದು ಕವಿತಾ ಸನಿಲ್ ಹೇಳಿದರು.

6 ಮೀಟರ್ ನೀರು ನಿಲುಗಡೆಯಾಗುವುದರೊಂದಿಗೆ ಬೇಸಿಗೆಯ ಅಂತ್ಯಕ್ಕೆ ಎದುರಾಗುವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿದ್ದು, ಆ ಮೂಲಕ ತನ್ನ ಅವಧಿಯಲ್ಲಿ ಮಾಡಿದ ಈ ಸಾಧನೆಯ ಬಗ್ಗೆ ತನಗೆ ತೃಪ್ತಿ ಇದೆ ಎಂದು ಕವಿತಾ ಸನಿಲ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸಚೇತಕ ಶಶಿಧರ ಹೆಗ್ಡೆ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.

ವಾಣಿಜ್ಯ ಪರವಾನಿಗೆ ನವೀಕರಿಸದವರಿಗೆ ಬಿಸಿ

ನಗರದ ಹಲವು ಕಡೆ ವ್ಯಾಪಾರಿಗಳು ವಾಣಿಜ್ಯ ಪರವಾನಿಗೆ ನವೀಕರಿಸಿಲ್ಲ. ಅದರಲ್ಲೂ ಮದುವೆ ಹಾಲ್‌ಗಳಿಗೆ ಸಂಬಂಧಪಟ್ಟವರು ಹಲವು ವರ್ಷದಿಂದ ಇದನ್ನು ನವೀಕರಿಸದ ಕಾರಣ ಮನಪಾಕ್ಕೆ ಭಾರೀ ಹೊಡೆತ ಬಿದ್ದಿದೆ. ಇವೆಲ್ಲದರ ಪಟ್ಟಿಯನ್ನು ತರಿಸಿ 10 ದಿನದ ಹಿಂದೆ ನೋಟಿಸ್ ಜಾರಿಗೊಳಿಸಿತ್ತು. ಅದರಂತೆ ನಗರದ ಬೃಹತ್ ಹಾಲ್‌ಗೆ ಸಂಬಂಧಪಟ್ಟವರು 7 ಲಕ್ಷ ರೂ. ಒಂದೇ ಕಂತಿನಲ್ಲಿ ಪಾವತಿಸಿದ್ದಾರೆ. ಇನ್ನೂ ಕೆಲವರು ಹಣ ಪಾವತಿಸಿದ್ದು, ಸುಮಾರು 20 ಲಕ್ಷ ರೂ. ಜಮೆಯಾಗಿದೆ. ವಾರದೊಳಗೆ ಪರವಾನಿಗೆ ನವೀಕರಿಸದ ಎಲ್ಲ ಮದುವೆ ಹಾಲ್‌ಗಳಿಗೂ ದಾಳಿ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಕ್ರಮವಾಗಿ ನಳ್ಳಿ ನೀರಿನ ಸಂಪರ್ಕ ಪಡೆದವರ ಮೇಲೂ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ. ಮೊದಲು ನೋಟಿಸ್ ಜಾರಿಗೊಳಿಸಿ ದಂಡದೊಂದಿಗೆ ಸಕ್ರಮವಾಗಿಸಲು ಸೂಚಿಸಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಕಠಿಣ ಕ್ರಮ ಜರಗಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News