×
Ad

ಜ.12ರಿಂದ ಮೂಡುಬಿದಿರೆಯಲ್ಲಿ '24ನೆ ಆಳ್ವಾಸ್ ವಿರಾಸತ್'

Update: 2018-01-10 23:23 IST

ಮಂಗಳೂರು, ಜ.10: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ದ ವತಿಯಿಂದ ನಡೆಸಲ್ಪಡುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ತನ್ನ 24ನೆ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ವರ್ಷದ ‘ಆಳ್ವಾಸ್ ವಿರಾಸತ್’ ಜ.12ರಿಂದ 14ರವರೆಗೆ ಮೂಡುಬಿದಿರೆಯ ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್ ಆವರಣದಲ್ಲಿ ನಡೆಯಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸುಮಾರು 40,000ಕ್ಕಿಂತ ಅಧಿಕ ಪ್ರೇಕ್ಷಕರು ಕುಳಿತು ನೋಡಬಹುದಾದ ಆಸನಗಳ ವ್ಯವಸ್ಥೆ ಇರುವ ವಿಶಾಲ ಪ್ರದೇಶ ಇದಕ್ಕೆ ಸಜ್ಜಾಗಿದ್ದು, ಜ.12ರಂದು ಸಂಜೆ 5:15ಕ್ಕೆ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಉದ್ಘಾಟನಾ ಸಮಾರಂಭವು ತೆರೆದುಕೊಳ್ಳುತ್ತವೆ. 5:30ಕ್ಕೆ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ವಿರಾಸತ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಪದ್ಮಭೂಷಣ ರಾರ್ಜ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತಿತರರು ಪಾಲ್ಗೊಳ್ಳಲಿದ್ದು, ಈ ಸಂದರ್ಭ ಪದ್ಮಭೂಷಣ ಪಂಡಿತ್ ರಾಜನ್‌ಸಾಜನ್ ಮಿಶ್ರಾ ಸಹೋದರರಿಗೆ ‘ಆಳ್ವಾಸ್ ವಿರಾಸತ್ 2018’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಶೋಭಾ ಬ್ರೂಟಾ ಅವರಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ನೀಡಿ ಗೌರಸಲಾಗುವುದು. ಪ್ರಶಸ್ತಿಯು 25,000 ರೂ.ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಜ.12ರಂದು ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಾದ ಕೆ.ಕೆ.ಮತ್ತು ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ. ಜ.13ರಂದು ಬಹುಭಾಷಾ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ ಶಂಕರ ಮಹದೇವನ್-ಎಹ್ಸಾನ್-ಲೋಯ್ ಮತ್ತು ಸಿದ್ಧಾರ್ಥ ಮಹದೇವನ್ ತಂಡವು ‘ಸುಮಧುರ ಸಂಗೀತ’ದ ಮೂಲಕ ಜನಮನಸೂರೆಗೊಳ್ಳಲಿದೆ. ಜ.14ರಂದು ಹಿಂದಿ ಚಿತ್ರರಂಗದ ಹಿನ್ನ್ನೆಲೆ ಗಾಯಕ ಕೈಲಾಶ್ ಖೇರ್ ಮತ್ತು ತಂಡವು ಚಿತ್ರಸಂಗೀತಾಸಕ್ತರಲ್ಲಿ ಸಂಚಲನವನ್ನುಂಟು ಮಾಡಲಿವೆ. ಅದಲ್ಲದೆ ಮೂರು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜ.14ರವರೆಗೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಸಮಕಾಲೀನ ಚಿತ್ರಕಲಾವಿದರಿಂದ ಚಿತ್ರಕಲಾ ಶಿಬಿರವು ನಡೆಯಲಿದೆ. ಈ ಚಿತ್ರಕಲಾದರ ಕಲಾನೈಪುಣ್ಯವನ್ನು ಕಲಾಸಕ್ತರಿಗೆ ಆಸ್ವಾದಿಸಲು ಆರುದಿನವೂ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಅವಕಾಶವನ್ನು ನೀಡಲಾಗಿದೆ. ಜೊತೆಗೆ ಅಪೂರ್ವ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News