ಭಯೋತ್ಪಾದಕರು ನಮ್ಮ ಸೋದರರು : ಬಿಜೆಪಿ ಮೈತ್ರಿಪಕ್ಷ ಪಿಡಿಪಿ ಶಾಸಕನ ಹೇಳಿಕೆ

Update: 2018-01-11 13:25 GMT

ಜಮ್ಮು, ಜ.11: ಭಯೋತ್ಪಾದಕರು ನಮ್ಮ ಸೋದರರು ಹಾಗೂ ಹುತಾತ್ಮರಾಗಿದ್ದು ಅವರ ಸಾವನ್ನು ಸಂಭ್ರಮಿಸಬಾರದು ಎಂದು ರಾಜ್ಯದ ಆಡಳಿತಾರೂಢ ಬಿಜೆಪಿ ಮೈತ್ರಿಪಕ್ಷವಾದ ಪಿಡಿಪಿಯ ಪಕ್ಷದ ಶಾಸಕ ಐಜಾಝ್ ಅಹ್ಮದ್ ಮೀರ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

   ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಬುಧವಾರ ನೀಡಿದ ಹೇಳಿಕೆಯನ್ನು ಗುರುವಾರ ಪುನರುಚ್ಚರಿಸಿದ ಮೀರ್, “ಉಗ್ರಗಾಮಿಗಳು ಜಮ್ಮು ಕಾಶ್ಮೀರದವರು. ಅವರು ನಮ್ಮ ಹುಡುಗರೇ. ಅವರ ಸಾವನ್ನು ನಾವು ಸಂಭ್ರಮಿಸಬಾರದು” ಎಂದಿದ್ದಾರೆ. ಭಯೋತ್ಪಾದಕರು ನಮ್ಮ ಸೋದರರು ಹಾಗೂ ಹುತಾತ್ಮರು ಎಂದು ನೀವು ಭಾವಿಸುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, “ಖಂಡಿತಾ” ಎಂದು ಅವರು ಉತ್ತರಿಸಿದರು.

   ಭದ್ರತಾ ಪಡೆಗಳ ಬಗ್ಗೆ ಹಾಗೂ ಸಾವನ್ನಪ್ಪಿರುವ ಯೋಧರ ಪೋಷಕರ ಬಗ್ಗೆಯೂ ಮೀರ್ ಸಹಾನುಭೂತಿ ವ್ಯಕ್ತಪಡಿಸಿದರು. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸರಕಾರ ಪ್ರತ್ಯೇಕತಾವಾದಿಗಳ ಸಹಿತ ಸರ್ವಪಕ್ಷಗಳೊಂದಿಗೆ ಮಾತುಕತೆ ನಡೆಸಬೇಕೆಂದು ಬುಧವಾರ ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಮೀರ್ ಹೇಳಿಕೆ ನೀಡಿದ್ದರು.

ಮೂರು ತಿಂಗಳ ಹಿಂದೆ ಮೀರ್ ಅವರನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸಿದ್ದು ಮೀರ್ ಅದೃಷ್ಟವಶಾತ್ ಪಾರಾಗಿದ್ದರು. ಈ ಬಗ್ಗೆ ಉತ್ತರಿಸಿದ ಮೀರ್, ಅದು ಬಹುಷಃ ತಾತ್ವಿಕ ಭಿನ್ನಾಭಿಪ್ರಾಯದ ಕಾರಣ ನಡೆದ ದಾಳಿಯಾಗಿರಬಹುದು ಎಂದರು.

   “ಇದೊಂದು ಹಾಸ್ಯಾಸ್ಪದ ಹೇಳಿಕೆಯಾಗಿದ್ದು ಇದನ್ನು ಖಂಡಿಸುತ್ತೇನೆ. ಭಯೋತ್ಪಾದಕತೆಯನ್ನು ವೈಭವೀಕರಿಸುವ ಮೂಲಕ ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ. ಕಳೆದ 30 ವರ್ಷಗಳಿಂದ ಭಯೋತ್ಪಾದಕರ ಕೃತ್ಯಗಳಿಂದಾಗಿ ತಮ್ಮವರನ್ನು ಕಳೆದುಕೊಂಡ ಜನರ ಬಳಿ ಹೋಗಿ ಅವರೇನು ಹೇಳುತ್ತಿದ್ದಾರೆಂದು ಕೇಳಿ. ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಯಾದವರ ಕುಟುಂಬದವರ ಗಾಯಕ್ಕೆ ಉಪ್ಪು ಸವರುವ ಕಾರ್ಯ ಇದಾಗಿದೆ” ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಘಟಕಾಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.

ಪಿಡಿಪಿ ವಿರೋಧಾಭಾಸದ ಪಕ್ಷವಾಗಿದೆ. ಒಂದೆಡೆ ಅವರು ಭಯೋತ್ಪಾದಕರನ್ನು ಹತ್ಯೆ ಮಾಡುತ್ತಾರೆ, ಇನ್ನೊಂದೆಡೆ ಪಿಡಿಪಿ ಶಾಸಕ ಈ ರೀತಿಯ ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗೂ ಶಾಸಕ ಮೀರ್ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಪಕ್ಷ ನ್ಯಾಷನಲ್ ಕಾನ್ಫರೆನ್ಸ್‌ನ ಹಿರಿಯ ಮುಖಂಡ ಅಕ್ಬರ್ ಲೋನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News