×
Ad

ಸುಂಕ ಪ್ರಕರಣ: ಸಿಬಿಐ ನ್ಯಾಯಾಲಯದ ಮುಂದೆ ಶಶಿಕಲಾ ಪತಿ ಶರಣಾಗತಿ

Update: 2018-01-11 20:41 IST

ಚೆನ್ನೈ, ಜ.11: ಸುಂಕ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಕೆ ಶಶಿಕಲಾ ಅವರ ಪತಿ ಎಂ. ನಟರಾಜನ್ ಅವರು ಗುರುವಾರದಂದು ಚೆನ್ನೈಯಲ್ಲಿರುವ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

1994ರಲ್ಲಿ ನಟರಾಜನ್ ಅವರು ಬ್ರಿಟನ್‌ನಿಂದ ವೈಭವೋಪೇತ ಕಾರನ್ನು ಆಮದು ಮಾಡಿಕೊಂಡ ಸಂದರ್ಭದಲ್ಲಿ ಕಸ್ಟಮ್ಸ್ ಸುಂಕ ಪಾವತಿ ಮಾಡದೆ ತಪ್ಪಿಸಿಕೊಂಡಿದ್ದರು. ಉಪಯೋಗಿಸಲ್ಪಟ್ಟಿರುವ ಹಳೆಯ ಕಾರನ್ನು ತಾನು ಖರೀದಿಸಿರುವುದಾಗಿ ನಟರಾಜನ್ ಹೇಳುವ ಮೂಲಕ 1.06 ಕೋಟಿ ರೂ. ತೆರಿಗೆಯನ್ನು ವಂಚಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯವು ನಟರಾಜನ್ ಹಾಗೂ ಇತರ ಮೂವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಆದರೆ ಅವರು ತಲಾ 25 ಲಕ್ಷ ರೂ. ರಿಜಿಸ್ಟ್ರಿಗೆ ಪಾವತಿಸುವಂತೆ ಸೂಚಿಸಿತ್ತು. ಟೊಯೊಟಾ ಲೆಕ್ಸಸ್ ಕಾರನ್ನು ಆಮದು ಮಾಡಿಕೊಂಡು ಸುಂಕ ಪಾವತಿ ತಪ್ಪಿಸಿಕೊಂಡ ಕಾರಣಕ್ಕಾಗಿ ಕೆಳನ್ಯಾಯಾಲಯವು ನಟರಾಜನ್ ಹಾಗೂ ಅವರ ಸಂಬಂಧಿಗಳಾದ ವಿ. ಬಾಲಕೃಷ್ಣನ್, ಯೋಗೀಶ್ ಬಾಲಕೃಷ್ಣನ್ ಮತ್ತು ಸುಜರಿತ ಸುಂದರರಾಜನ್ ಅವರಿಗೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ನವೆಂಬರ್‌ನಲ್ಲಿ ಮದ್ರಾಸ್ ಉಚ್ಛ ನ್ಯಾಯಾಲಯ ಎತ್ತಿಹಿಡಿದಿತ್ತು.

ಆರೋಪಿಗಳು ನೀಡಿರುವ ದಾಖಲೆಗಳು ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಟರಾಜನ್ ಹಾಗೂ ಇತರ ಆರೋಪಿಗಳ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿತ್ತು. ಕಾರು ಖರೀದಿಸಿದ್ದ ನಿಜವಾದ ದಾಖಲೆಯನ್ನು ಬದಲು ಮಾಡಿ ಅದರ ಪ್ರತಿಯಾಗಿ ಕಾರನ್ನು 1993ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಮೂದಿಸಿರುವ ನಕಲಿ ದಾಖಲೆಯನ್ನು ನೀಡಲಾಗಿದೆ ಎಂದು ಸಿಬಿಐ ಆರೋಪಿಸಿತ್ತು.

ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆರ) 1973 ಮತ್ತು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ, 1999ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಅನಾರೋಗ್ಯ ಕಾರಣವನ್ನು ನೀಡಿ ನಟರಾಜನ್ ಪ್ರತಿ ಬಾರಿಯೂ ನ್ಯಾಯಾಲಯದಲ್ಲಿ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ಅವರು ಕರುಳು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News