ಸುರತ್ಕಲ್‌ನಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರು, ಜ.11: ಸುರತ್ಕಲ್‌ನಲ್ಲಿ ಜ.3ರಂದು ರಾತ್ರಿ ಬಂದರ್ ನಿವಾಸಿ ಮುಹಮ್ಮದ್ ಮುಬಶ್ಶಿರ್(22) ಎಂಬವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ರೌಡಿ ನಿಗ್ರಹ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುರತ್ಕಲ್ ಅಗರಮೇಲು ನಿವಾಸಿ ಯಶೋಧರ (20) ಮತ್ತು ಬಾದಾಮಿ ತಾಲೂಕಿನ ಪ್ರಸ್ತುತ ಬೈಕಂಪಾಡಿಯಲ್ಲಿ ಬಾಡಿಗೆ ಮನೆಯಲ್ಲಿರುವ ಪ್ರೀತಂ ಅಲಿಯಾಸ್ ಗೌಡಪ್ಪ (20) ಎಂಬವರನ್ನು ರೌಡಿ ನಿಗ್ರಹ ದಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಸಂಘಪರಿವಾರ ಸಂಘಟನೆಗಳಿಗೆ ಸೇರಿದವರೆನ್ನಲಾಗಿದೆ.
ಜನವರಿ 3ರಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರ ಹತ್ಯೆ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ಸುರತ್ಕಲ್‌ನಲ್ಲಿ ಮುಬಶ್ಶಿರ್‌ನ ಮೇಲೆ ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಹಲ್ಲೆಗೈದು ಪರಾರಿಯಾಗಿದ್ದರು. ಮಂಗಳೂರಿನ ಬಂದರ್ ನಿವಾಸಿಯಾಗಿರುವ ಮುಹಮ್ಮದ್ ಮುಬಶ್ಶಿರ್ ಅವರ ದೊಡ್ಡಪ್ಪನ ಮಗನ ವಿವಾಹವು ಜ.3ರಂದು ಕಾಟಿಪಳ್ಳದಲ್ಲಿ ನೆರವೇರಿತ್ತು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಕಾಟಿಪಳ್ಳದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಸುರತ್ಕಲ್ ಬಳಿ ತಂಡವೊಂದು ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಮುಬಶ್ಶಿರ್‌ರವರ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದಾಳಿ ಪ್ರಕರಣಕ್ಕೆ ಸಂಬಂಧಿಸಿ ಯಶೋಧರ ಮತ್ತು ಗೌಡಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಅವರ ನೇತೃತ್ವದ ರೌಡಿ ನಿಗ್ರಹ ದಳದಲ್ಲಿ ಎಎಸ್‌ಐ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್, ಇಸಾಕ್, ಕೃಷ್ಣ ಬಿ.ಕೆ., ವಿಜಯ ಕಾಂಚನ್, ರಾಜ, ಶರಣ್ ಕಾಳಿ ಚಂದ್ರನ್ ಆಳ್ವ ಮತ್ತು ರಾಧಾಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.