ಪರೀಕ್ಷಾ ವೇಳಾಪಟ್ಟಿಯಲ್ಲಿ ಇನ್ನಷ್ಟು ಬಿಡುವಿನ ದಿನಗಳನ್ನು ನೀಡಲು ಸಾಧ್ಯವಿಲ್ಲ:ಸಿಬಿಎಸ್‌ಇ

Update: 2018-01-11 16:22 GMT

ಹೊಸದಿಲ್ಲಿ,ಜ.11: ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಿದ ನಂತರವೇ 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಆಕ್ರೋಶಿತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಮಂಡಳಿಯ ಈ ಸ್ಪಷ್ಟನೆ ಹೊರಬಿದ್ದಿದೆ.

ಮಂಡಳಿಯು ಮಾ.20ರಂದು ಇತಿಹಾಸ ಮತ್ತು ಮಾ.21ರಂದು ಗಣಿತ ಪರೀಕ್ಷೆಗಳನ್ನು ನಿಗದಿಗೊಳಿಸಿದೆ. ಈ ಪರೀಕ್ಷೆಗಳ ನಡುವೆ ಬಿಡುವು ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಪೂರ್ವ ಸಿದ್ಧತೆಯ ಮೇಲೆ ತೀವ್ರ ಪರಿಣಾಮವಾಗುತ್ತದೆ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಎಂಬ ಕಳವಳಗಳು ವ್ಯಕ್ತವಾಗಿವೆ.

ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ ಜೆಇಇ ದೈಹಿಕ ಶಿಕ್ಷಣ ಪರೀಕ್ಷೆಗೆ ಒಂದು ದಿನ ಮೊದಲು, ಅಂದರೆ ಎ.8ರಂದು ನಡೆಯಲಿದೆ.

ಮಾನವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಎ.5ರಿಂದ 7ರವರೆಗೆ ನಿರಂತರವಾಗಿ ಮೂರು ವಿಷಯಗಳ ಪರೀಕ್ಷೆಯನ್ನು ಬರೆಯಬೇಕಿದೆ. ಒಂದು ದಿನದ ಬಿಡುವಿನ ಬಳಿಕ ಎ.9ರಂದು ದೈಹಿಕ ಶಿಕ್ಷಣ ಪರೀಕ್ಷೆ ನಡೆಯಲಿದೆ.

ಹಾಲಿ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ವಿವಿಧ ವಿಭಾಗಗಳ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಕೆಲವು ಪರೀಕ್ಷೆಗಳ ಮಧ್ಯೆ ಬಿಡುವು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಸುಮಾರು 200 ವಿಷಯಗಳಿದ್ದು, ವಿದ್ಯಾರ್ಥಿಗಳು ಯಾವುದೇ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸಂಯೋಜನೆಗಳು ಹೇಗಿವೆಯೆಂದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾನವ ಶಾಸ್ತ್ರ ವಿಭಾಗದ ಒಂದು ಮತ್ತು ವಾಣಿಜ್ಯ ವಿಭಾಗದ ಒಂದು ವಿಷಯವನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಇತರ ವಿಭಾಗಗಳ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ ನಾವೆಷ್ಟೇ ಪ್ರಯತ್ನಿಸಿದರೂ ಕೆಲವು ಪರೀಕ್ಷೆಗಳ ನಡುವೆ ಬಿಡುವು ಇಲ್ಲದಿರುವುದು ಸಹಜವಾಗಿದೆ ಎಂದು ಅಧಿಕಾರಿ ಯೋರ್ವರು ವಿವರಿಸಿದರು.

12ನೇ ತರಗತಿಯ ಪರೀಕ್ಷೆಗಳು ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭವಾಗಲಿವೆ. ಎಪ್ರಿಲ್ ಮೊದಲ ವಾರದ ಬಳಿಕ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುವುದರಿಂದ ಅಷ್ಟರೊಳಗೆ ಮುಗಿಯುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.

  ವಿದ್ಯಾರ್ಥಿಗಳು ಸುಧಾರಿಸಿಕೊಳ್ಳಲು ಎರಡು ಪರೀಕ್ಷೆಗಳ ನಡುವೆ ಕನಿಷ್ಠ ಒಂದು ಬಿಡುವಿನ ಅಗತ್ಯವಿದೆ ಎಂದು ದಿಲ್ಲಿಯ ಅಹಿಕಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಅಶೋಕ ಪಾಂಡೆ ಅವರು ಕಳವಳ ವ್ಯಕ್ತಪಡಿಸಿದರು.

12ನೆ ತರಗತಿಯ ಪರೀಕ್ಷೆಗಳು ಎ.12ರಂದು ಮತ್ತು 10ನೇ ತರಗತಿಯ ಪರೀಕ್ಷೆಗಳು ಎ.4ರಂದು ಮುಗಿಯಲಿವೆ. ಸಮಗ್ರ ಪರೀಕ್ಷಾ ಪ್ರಕ್ರಿಯೆ 38 ದಿನಗಳಲ್ಲಿ ಪೂರ್ಣಗೊಳ್ಳ ಲಿದ್ದು, ಇದರಿಂದ ಮೌಲ್ಯಮಾಪನಕ್ಕೆ ಹೆಚ್ಚಿನ ಸಮಯ ದೊರೆಯಲಿದೆ ಎಂದು ಸಿಬಿಎಸ್‌ಇ ಅಧಿಕಾರಿ ತಿಳಿಸಿದರು.

12ನೇ ತರಗತಿಯ ಪರೀಕ್ಷೆಗಳಿಗೆ ಇಬ್ಬರು ತೃತೀಯ ಲಿಂಗಿಗಳು ಸೇರಿದಂತೆ ಸುಮಾರು 11.86 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News