ಸಮುದ್ರದಲ್ಲಿ ಉರಿಯುತ್ತಿದ್ದ ತೈಲ ಟ್ಯಾಂಕರ್‌ನ ಮುಂಭಾಗ ಸ್ಫೋಟ

Update: 2018-01-11 16:59 GMT

ಬೀಜಿಂಗ್, ಜ. 11: ಪೂರ್ವ ಚೀನಾ ಕರಾವಳಿಯ ಸಮುದ್ರದಲ್ಲಿ ಹಲವು ದಿನಗಳಿಂದ ಉರಿಯುತ್ತಿದ್ದ ಇರಾನ್ ತೈಲ ಟ್ಯಾಂಕರ್‌ನ ಮುಂಭಾಗ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ 31 ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ರಕ್ಷಣಾ ದೋಣಿಗಳು ಹಿಂದಕ್ಕೆ ಸರಿದಿವೆ ಹಾಗೂ ಜಲಮಾಲಿನ್ಯ ಭೀತಿ ಕಾಣಿಸಿಕೊಂಡಿದೆ.

ಇರಾನ್‌ನಿಂದ ದಕ್ಷಿಣ ಕೊರಿಯಕ್ಕೆ 1,36,000 ಟನ್ ತೈಲವನ್ನು ಒಯ್ಯುತ್ತಿದ್ದ ತೈಲ ಟ್ಯಾಂಕರ್ ಹಾಂಕಾಂಗ್‌ನ ಸರಕು ಸಾಗಣೆ ನೌಕೆಯೊಂದಿಗೆ ಶನಿವಾರ ಯಾಂಗ್‌ಝೆ ನದಿ ಅಳಿವೆಯಿಂದ ಸುಮಾರು 160 ಸಮುದ್ರ ಮೈಲಿ ದೂರದಲ್ಲಿ ಢಿಕ್ಕಿಯಾಗಿತ್ತು.

30 ಇರಾನಿಯನ್ನರು ಮತ್ತು ಇಬ್ಬರು ಬಾಂಗ್ಲಾದೇಶಿಗಳು ಸೇರಿದಂತೆ 32 ಸಿಬ್ಬಂದಿ ನಾಪತ್ತೆಯಾಗಿದ್ದರು. ಅಂದಿನಿಂದ ತೈಲ ನೌಕೆ ಉರಿಯುತ್ತಿತ್ತು. ಈ ವರೆಗೆ ಜೀವಂತವಾಗಿ ಯಾರನ್ನೂ ಪತ್ತೆಹಚ್ಚಲಾಗಿಲ್ಲ. ಕೇವಲ ಒಂದು ಮೃತದೇಹವನ್ನು ಪತ್ತೆಹಚ್ಚಲಾಗಿದೆ.

ಅದೇ ವೇಳೆ, ಹಾಂಕಾಂಗ್ ನೌಕೆಯಲ್ಲಿದ್ದ ಎಲ್ಲ 21 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ತೈಲ ಟ್ಯಾಂಕರ್‌ನ ಮುಂಭಾಗ ಬುಧವಾರ ಸ್ಫೋಟಗೊಂಡಿದೆ.

‘‘ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ನೌಕೆಗಳು ಅಲ್ಲಿಂದ ಸುರಕ್ಷಿತ ದೂರಕ್ಕೆ ಹಿಂದಿರುಗಬೇಕಾಗಿದೆ’’ ಎಂದು ಚೀನಾದ ಸಾರಿಗೆ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News