×
Ad

ಮನಪಾ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಸಂಸದ ನಳಿನ್ ಆಗ್ರಹ

Update: 2018-01-11 22:50 IST

ಮಂಗಳೂರು, ಜ. 11: ಮನಪಾ ವ್ಯಾಪ್ತಿಯಲ್ಲಿ ಎಡಿಬಿ ಮೊದಲ ಹಂತದ ಯೋಜನೆಯಲ್ಲಿ ಕುಡ್ಸೆಂಪ್ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳದೆ ಹಸ್ತಾಂತರ ಮಾಡುವ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ.

ಸುರತ್ಕಲ್ ಮಾಧವನಗರದ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ, ಪಡೀಲ್ ಮತ್ತು ಬಜಾಲ್‌ನ ರೇಚಕ ಸ್ಥಾವರಗಳಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.

ನಗರದ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ 218 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಯುಜಿಡಿ ಲೈನ್ ಪೂರ್ತಿ ಮಾಡದೆ ಸಂಪರ್ಕ ಕಲ್ಪಿಸಿದ ಕಾರಣ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಮನಪಾ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗಿದೆ. ಒಳಚರಂಡಿಯಲ್ಲಿ ಹರಿಯಬೇಕಾದ ತ್ಯಾಜ್ಯನೀರು ಮಳೆ ನೀರಿನ ತೋಡಿನಲ್ಲಿ ಹರಿಯುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧಿಕರಣಗೊಳ್ಳದೆ ಖಾಸಗಿ ಸ್ಥಳದಲ್ಲಿ ಹರಿದು ನಗರದ ವಿವಿಧೆಡೆ ಜನರಿಗೆ ರೋಗಭೀತಿ ಎದುರಾಗಿದೆ ಎಂದು ಅವರು ಹೇಳಿದರು.

ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ನಡೆಸದೇ ಹಸ್ತಾಂತರ ಮಾಡಿರುವುದೇ ಇಂತಹ ತೊಂದರೆಗಳಿಗೆ ಕಾರಣವಾಗಿದ್ದು, ಇದನ್ನು ತನಿಖೆಗೊಳಪಡಿಸ ಬೇಕೆಂದು ಅವರು ಒತ್ತಾಯಿಸಿದರು. 5 ರೇಚಕ ಸ್ಥಾವರಗಳು ಕೆಲಸ ನಿರ್ವಹಿಸುತ್ತಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕಗಳೂ ಸಮರ್ಪಕವಾಗಿಲ್ಲ. ಯಾವುದೇ ಘಟಕದಲ್ಲಿ ಜನರೇಟರ್ ವ್ಯವಸ್ಥೆ ಇಲ್ಲ. ಕೊಳಚೆ ನೀರು ಹರಿಯುವ ಸ್ಥಳದಲ್ಲೇ ಕುಡಿಯುವ ನೀರಿನ ಪೈಪ್ ಇದೆ. ಸಾರ್ವಜನಿಕ ಬಾವಿಗಳಲ್ಲಿ ಕೊಳಚೆ ನೀರು ತುಂಬಿಕೊಂಡು ಜನರು ನೀರು ಬಳಸದಂತಾಗಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.

ಒಳಚರಂಡಿ ಕಾಮಗಾರಿಗಳಿಗೆ ರೈಲ್ವೆ ಇಲಾಖೆಯಿಂದ ಇದ್ದ ಅಡ್ಡಿಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕೊಡಿಪಾಡಿ ಮಾಧವನಗರದಲ್ಲೂ ಒಳಚರಂಡಿ ವ್ಯವಸ್ಥೆಗೆ ರೈಲ್ವೆ ಇಲಾಖೆಯಿಂದ ಅನುಮತಿ ದೊರಕಿಸಿಕೊಡಲಾಗುವುದು ಎಂದರು.

‘‘ತ್ಯಾಜ್ಯ ನೀರು ಸಂಸ್ಕರಣೆ ಮಾಡಿಯೇ ಹೊರಬಿಡುತ್ತೇವೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಕಾರಿಗಳು ಪರಿಶೀಲನೆ ನಡೆಸುತ್ತಾರೆ. ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ತ್ಯಾಜ್ಯ ನೀರು ಸಂಸ್ಕರಣೆ ನಡೆಸಲಾಗುತ್ತಿಲ್ಲ ಎಂದು ಘಟಕದ ಎಂಜಿನಿಯರ್ ವಿಶ್ವನಾಥ ತಿಳಿಸಿದರು.

ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಮನಪಾ ಪ್ರತಿಪಕ್ಷ ಮುಖಂಡ ಗಣೇಶ ಹೊಸಬೆಟ್ಟು, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷ ಡಾ. ವೈ. ಭರತ್ ಶೆಟ್ಟಿ, ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಮನಪಾ ಸದಸ್ಯರಾದ ರೂಪಾ ಬಂಗೇರ, ಸುಮಿತ್ರಾ ಕರಿಯ, ಸುಧೀರ್ ಶೆಟ್ಟಿ ಕಣ್ಣೂರು, ಪೂರ್ಣಿಮಾ, ಜಯಂತಿ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News