ಸ್ವಚ್ಛತಾ ಅಭಿಯಾನ: ಕಾಪು ಪುರಸಭೆಗೆ ಅಧಿಕಾರಿಗಳ ಭೇಟಿ
ಕಾಪು, ಜ. 12: ಸ್ವಚ್ಛ ಸರ್ವೇಕ್ಷಣೆ 2018ರ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸ್ವಚ್ಛತಾ ಅಭಿಯಾನ ಮತ್ತು ಅದರ ಕುರಿತಾದ ಸಾಧಕ-ಬಾಧಕಗಳ ಕುರಿತಾಗಿ ನಡೆಸಲಾಗಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಅಧಿಕೃತ ಮಾಹಿತಿ ಪಡೆಯುವ ಅಂಗವಾಗಿ ದಾಖಲೆ ಪರಿಶೀಲಗೆ ಅಧಿಕಾರಿಗಳ ತಂಡವು ಶುಕ್ರವಾರ ಕಾಪು ಪುರಸಭೆಗೆ ಭೇಟಿ ನೀಡಿತು.
ಭಾರತ ಸರ್ಕಾರದ ಸ್ವಚ್ಛ ಭಾರತ್ ಪರಿಕಲ್ಪನೆಯ ಅಂಗವಾಗಿ ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ ಅಧೀನದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸಂಬಂಧಿಸಿ ಕೈಗೆತ್ತಿಕೊಳ್ಳಲಾಗಿರುವ ಕಾರ್ಯಕ್ರಮಗಳು, ಶೌಚಾಲಯ ಮುಕ್ತ ಪುರಸಭೆ ಕಲ್ಪನೆಯಡಿ ನಡೆಸಿರುವ ಕಾರ್ಯಕ್ರಮಗಳು, ಸ್ವಚ್ಛತೆಗೆ ನೀಡಿರುವ ಆದ್ಯತೆ, ಹಸಿ ಕಸ-ಒಣ ಕಸ ಬೇರ್ಪಡಿಸುವಿಕೆ ಸಹಿತವಾಗಿ ಇತ್ಯಾದಿ ವಿಷಯಗಳ ಬಗ್ಗೆ ಕೈಗೆತ್ತಿಕೊಳ್ಳಲಾಗಿರುವ ಅನುಷ್ಟಾನ ಕ್ರಮಗಳ ಕುರಿತಾಗಿ ದಾಖಲಾತಿ, ಮಾಹಿತಿಯನ್ನು ಸಂಗ್ರಹಿಸಿದರು.
ಸರ್ವೇಕ್ಷಣೆಗಾಗಿ ಆಗಮಿಸಿದ್ದ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಮೂಲಕವಾಗಿ ಸ್ವಚ್ಛತಾ ಸರ್ವೇಕ್ಷಣೆಯ ಬಗ್ಗೆ ಅಧಿಕೃತವಾಗಿ ನಿಯೋಜಿತ ವಾಗಿರುವ ಕಾರ್ವಿ ಡಾಟಾ ಮ್ಯಾನೇಜ್‌ಮೆಂಟ್ ಸರ್ವೀಸಸ್‌ನ ಅಧಿಕಾರಿ ರಾಕೇಶ್ ಸಿ. ಎಸ್. ಮಾತನಾಡಿ, ಕಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಯ ಬಗ್ಗೆ ಅನುಷ್ಠಾನಕ್ಕೆ ತರಲಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಆ್ಯಪ್ ಮೂಲಕವಾಗಿ ಅಪ್‌ಲೋಡ್ ಮಾಡಲಾಗುವುದು. ಆ್ಯಪ್ ಮೂಲಕ ಅಪ್‌ಲೋಡ್ ಮಾಡಿದ ಮಾಹಿತಿಯನ್ನು ನಗರಾಭಿವೃದ್ಧಿ ಇಲಾಖೆ ತತ್‌ಕ್ಷಣ ಪರಿಶೀಲನೆ ಮಾಡುತ್ತದೆ ಎಂದರು.
ಸ್ವಚ್ಛತಾ ಸರ್ವೇಕ್ಷಣೆಗಾಗಿ ಕೈಗೆತ್ತಿಕೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ಮೂರು ಹಂತಗಳಲ್ಲಿ ಪರಿಶೀಲನೆ ನಡೆಯುತ್ತದೆ. ಪ್ರಥಮ ಹಂತದಲ್ಲಿ ಸೇವಾ ಹಂತದ ಪ್ರಗತಿ, ದ್ವಿತೀಯ ಹಂತದಲ್ಲಿ ದೆಹಲಿ ತಂಡ ಪುರಸಭಾ ವ್ಯಾಪ್ತಿಯ ಪ್ರದೇಶಕ್ಕೆ ಆಗಮಿಸಿ ಪ್ರತ್ಯಕ್ಷ ವೀಕ್ಷಣೆ ನಡೆಸಿ ಮತ್ತು ಮೂರನೇ ಹಂತದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಪಡೆದು ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಕಾಪು ಪುರಸಭೆ ಪಡೆದಿರುವ ಅಂಕಗಳನ್ನು ಘೋಷಿಸಲಾಗುತ್ತದೆ ಎಂದರು.
ರಾಜ್ಯದಲ್ಲೇ ಪ್ರಥಮ ಪುರಸಭೆ: ಸ್ವಚ್ಛತಾ ಸರ್ವೇಕ್ಷಣೆ ಬಗ್ಗೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಪುರಸಭೆ ಮೂಲಕ ಸ್ವಚ್ಛ ಕಾಪು - ಸುಂದರ ಕಾಪು ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದ್ದು, ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಪುರಸಭೆಯಾಗಿ ಮೂಡಿ ಬರುತ್ತದೆ ಎಂಬ ವಿಶ್ವಾಸವಿದೆ ಎಂದರು.
ಕೇಂದ್ರ ಸರ್ಕಾದಿಂದ ನಿಯೋಜಿಸಲ್ಪಟ್ಟಿರುವ ಕಾರ್ವಿ ಸಂಸ್ಥೆಯು ವಿವಿಧ ದಾಖಲಾತಿಗಳನ್ನು ಸಂಗ್ರಹಿಸಿ, ಪರಿಶೀಲನೆ ನಡೆಸುತ್ತಿದೆ. ಅವರ ಪ್ರಶ್ನೆಗಳಿಗೆ ಪೂರಕವಾಗಿ ಉತ್ತರವನ್ನು ನೀಡಿದ್ದೇವೆ. ಕಾಪು ಪುರಸಭೆಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸ್ವಚ್ಛತಾ ಅಭಿಯಾನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿದೆ.