ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಸಂತಾಪ ಸಭೆ

Update: 2018-01-12 14:25 GMT

ಮಂಗಳೂರು, ಜ.12: ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಹತ್ಯೆಯನ್ನು ಖಂಡಿಸಿ ಇಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾವಪೂರ್ಣ ಸಂತಾಪ ಸಭೆ ನಡೆಯಿತು.

ನಗರದ ನೆಹರೂ ಮೈದಾನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅಗಲಿದ ದೀಪಕ್ ರಾವ್ ಹಾಗೂ ಅಬ್ದುಲ್ ಬಶೀರ್‌ರನ್ನು ಸ್ಮರಿಸಿ ಮೌನಾಚರಿಸಿದರು. ಮಾತ್ರವಲ್ಲದೆ, ಸೇರಿದ್ದವರು ಒಗ್ಗಟ್ಟು ಪ್ರದರ್ಶಿಸಿ, ಮುಂದೆ ಜಿಲ್ಲೆಯಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಿರಲೆಂದು ಪ್ರಾರ್ಥಿಸಿದರು. ಕೈಗಳನ್ನು ಎತ್ತಿ ಹಿಡಿದು ಒಗ್ಗಟ್ಟು ಪ್ರದರ್ಶನದ ಜತೆಗೆ ಅಗಲಿದವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು.

ಹತ್ಯೆಯ ಕಾರಣಕರ್ತರ ಬಂಧನವಾಗಲಿ

ಸಂತಾಪ ಸಭೆಯನ್ನು ಉದ್ಘಾಟಿಸಿದ ಮುಸ್ಲಿಂ ಮುಖಂಡ ಹಾಜಿ ಹಮೀದ್ ಕಂದಕ್, ದೀಪಕ್ ರಾವ್ ಹಾಗೂ ಬಶೀರ್ ಎಂಬಿಬ್ಬರು ಅಮಾಯಕರ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಮತ್ತು ಹತ್ಯೆಯ ಕಾರಣಕರ್ತರನ್ನು ಪತ್ತೆಹಚ್ಚಿ ಬಂಧಿಸುವ ಕೆಲಸವನ್ನು ಸರಕಾರ ತಕ್ಷಣ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜವನ್ನು ಒಡೆಯುವ ಇಂತಹ ಸಂದರ್ಭದಲ್ಲಿ ಪೊಲೀಸರು, ಸಂಘ ಪರಿವಾರದವರಿಗೆ ಹೆದರಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಹಾಗೆಂದು ನಾವು ತಲವಾರು ಹಿಡಿದು ಬೀದಿಗೆ ಇಳಿಯಬೇಕಾಗಿಲ್ಲ. ಬದಲಾಗಿ ನಾವೆಲ್ಲಾ ಒಂದಾಗಿ ಜಿಲ್ಲೆಯ ಸಹೋದರತೆಯನ್ನು ಕಾಪಾಡೋಣ ಎಂದು ಅವರು ಈ ಸಂದರ್ಭ ಕರೆ ನೀಡಿದರು.

ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ವಿಭಜಿಸಲು ಪ್ರಯತ್ನಿಸುವ, ಗಲಭೆಗಳ ಸಂದರ್ಭ ಮುಸ್ಲಿಂ ನಾಯಕನೆಂದು ಚಾನೆಲ್‌ಗಳಲ್ಲಿ ಫೋಸು ನೀಡುವ ನಮ್ಮೊಳಗಿನ ಕೆಲವರನ್ನೂ ಈ ಸಂದರ್ಭ ನಾವು ಬಹಿಷ್ಕರಿಸಬೇಕು ಎಂದು ಹಮೀದ್ ಕಂದಕ್ ಹೇಳಿದರು.

ಮುಸ್ಲಿಮರ ಓಲೈಕೆ ಬಿಟ್ಟು ರಾಜಕೀಯ ಅಸ್ತಿತ್ವ ಒದಗಿಸಿ: ಎಸ್.ಬಿ. ದಾರಿಮಿ

ಮುಸಲ್ಮಾನರನ್ನು ಯಾವ ಪಕ್ಷದವರೂ ಓಲೈಕೆ ಮಾಡುವುದು ಬೇಡ. ಅದು ಬಿಟ್ಟು ಸಮುದಾಯದ ಶಕ್ತಿಯನ್ನು ಬೆಳೆಸಿ ಭದ್ರತೆ ನೀಡಿ ರಾಜಕೀಯವಾಗಿ ಅಸ್ತಿತ್ವ ಒದಗಿಸಿ ಎಂದು ಪುತ್ತೂರು ಜುಮಾ ಮಸೀದಿ ಖತೀಬ್ ಎಸ್.ಬಿ. ದಾರಿಮಿ ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

ರಾಜಕೀಯಕ್ಕಾಗಿ ಹೆಣಗಳು ಮತ್ತು ದನಗಳು ಬೇಕಾಗುತ್ತದೆ. ಅದರ ಮೂಲಕ ಹಣವನ್ನು ಮಾಡುವ ಉದ್ದೇಶ ಕೆಲವರದ್ದಾಗಿರುತ್ತದೆ. ಆದರೆ ಯಾವುದೇ ತಪ್ಪಿಲ್ಲದೆ ವಿನಾ ಕಾರಣ ಪ್ರಾಣ ಕಳೆದುಕೊಂಡವರ ಹೆತ್ತವರ ಕಣ್ಣೀರು ಹತ್ಯೆ ಮಾಡಿದವರಿಗೆ ತಲೆಮಾರಿನುದ್ದಕ್ಕೂ ಶಾಪವಾಗಿ ಕಾಡಲಿದೆ ಎಂದು ಹೇಳಿದ ಅವರು, ಭಾರತ ಯಾವುದೋ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀವಿುತವಾಗಿರದೆ ಎಲ್ಲರದ್ದಾಗಿದೆ ಎಂದರು.

ಕರಾವಳಿಯಲ್ಲಿ ಇದು ಕೊನೆಯ ಸಂತಾಪ ಸೂಚನಾ ಸಭೆಯಾಗಿರಲಿ ಎಂದು ಹೇಳಿದ ಅವರು, ಹತ್ಯೆಗಳು ಇಂದು ನಿನ್ನೆಯದಲ್ಲ. ಆದರೆ ಹಿಂದೆಲ್ಲಾ ಹತ್ಯೆಗಳಾದಾಗ ಯಾಕಾಗಿ ಹತ್ಯೆ ನಡೆಯುತ್ತಿದೆ ಎಂಬುದು ಹತ್ಯೆ ಮಾಡುವವರಿಗೂ ಹತ್ಯೆಗೊಳದಾವರಿಗೂ ತಿಳಿದಿರುತ್ತಿತ್ತು. ದೇಶದ ಸ್ವಾತಂತ್ರದವರೆಗೂ ಇಂತಹ ಪರಿಸ್ಥಿತಿ ಮುಂದುವರಿದಿತ್ತು. ಬಳಿಕವಾದರೂ ಈ ಹತ್ಯೆಗಳು ನಿಲ್ಲುತ್ತವೆ ಎಂದು ಆಶಾಭಾವನೆ ಹೊಂದಲಾಗಿತ್ತಾದರೂ, ರಾಷ್ಟ್ರ ಪಿತನನ್ನೇ ಕೊಲ್ಲುವ ಮೂಲಕ ಗೋಡ್ಸೆ ಸಂತತಿ ದೇಶದಲ್ಲಿ ಮತ್ತೆ ಹತ್ಯೆಯ ಸರಣಿಯನ್ನು ಆರಂಭಿಸಿ ಮುಂದುವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸೇಡು ತೀರಿಸುವ ಪ್ರಕ್ರಿಯೆಯಾಗಿ ಹತ್ಯೆಗಳು ನಡೆಯುತ್ತಿರುವುದು ದುರದೃಷ್ಟಕರ. ಆದರೆ ನಾವು ಮೊದಲು ಮನುಷ್ಯರು, ಧರ್ಮ ಬಳಿಕ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಸ್.ಬಿ. ದಾರಿಮಿ ಹೇಳಿದರು.

ಕೂಳೂರು ಜುಮಾ ಮಸೀದಿಯ ಖತೀಬ್ ಬಶೀರ್ ಮದನಿ ಅಲ್‌ ಕಾಮಿಲ್ ಮಾತನಾಡಿ, ಸಮಸ್ಯೆಗಳಿಗೆ ಅಳುಕದೆ ಕ್ಷಮೆಯನ್ನು ಎತ್ತಿಹಿಡಿಯಲು ಕುರ್‌ಆನ್ ಬೋಧಿಸಿದೆ. ಇಂತಹ ಬೆಂಕಿಯಲ್ಲಿ ಅರಳಿದ ಧರ್ಮವನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಾಗದು. ಅಂತಹ ಕನಸು ಕಾಣುವುದು ಮೂರ್ಖತನ. ಶವಗಳ ಮೇಲಿನ ರಾಜಕೀಯ ಬಿಟ್ಟು ನಾವಿಂದು ಪರಸ್ಪರ ಒಂದಾಗಬೇಕು. ಮಾದರಿಯೋಗ್ಯ ಜನಾಂಗವಾಗಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.

ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿ, ನಾವು ನಮ್ಮ ಧರ್ಮವನ್ನು ಪ್ರೀತಿಸುವ ಜತೆಗೆ ಇತರ ಧರ್ಮವನ್ನು ಗೌರವಿಸಬೇಕು. ಯಾವುದೇ ರೀತಿಯ ಕೋಮು ಭಾವನೆಗಳನ್ನು ಎಲ್ಲರೂ ಖಂಡಿಸಬೇಕು ಎಂದರು.

ಸಭೆಯನ್ನುದ್ದೇಶಿಸಿ ಪಿಎಫ್‌ಐನ ಯಾಸಿರ್ ಹಸನ್, ಯುನಿವೆಫ್‌ನ ರಫಿಯುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಅಶ್ರಫ್, ಸೈಯದ್ ಮದನಿ ದರ್ಗಾದ ಅಬ್ದುಲ್ ರಶೀದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು ಹಾಗೂ ಇತರರು  ಮಾತನಾಡಿ ಶಾಂತಿಗಾಗಿ ಮನವಿ ಮಾಡಿದರು.

ವೇದಿಕೆಯಲ್ಲಿ ಹತ್ಯೆಗೊಳಗಾದ ಬಶೀರ್‌ ಅವರ ಪುತ್ರ ಇಬ್ರಾಹಿಂ, ಶಾಸಕ ಮೊಯ್ದಿನ್ ಬಾವಾ, ಹಾಜಿ ಮುಸ್ತಫಾ ಕೆಂಪಿ, ಮುಮ್ತಾಝ್ ಅಲಿ, ಹನೀಫ್ ಖಾನ್, ಡಾ. ಅಮೀರ್ ಅಹ್ಮದ್ ತುಂಬೆ, ಶಾಫಿ ಬೆಳ್ಳಾರೆ, ಅಬ್ದುಲ್ ಲತೀಫ್, ಅಬ್ದುಲ್ ಜಲೀಲ್, ನವಾಝ್ ಉಳ್ಳಾಲ, ಸುಹೇಲ್ ಕಂದಕ್ ಮೊದಲಾದವರು ಉಪಸ್ಥಿತರಿದ್ದರು.


ಸಂಸದ ನಳಿನ್ ಕುಮಾರ್‌ರ ಸಹಾನುಭೂತಿ ಬೇಕಾಗಿಲ್ಲ: ಹಮೀದ್ ಕಂದಕ್
ಬಶೀರ್ ಹತ್ಯೆಯಾದಾಗ ಅವರ ಮನೆಗೆ ಹೋಗಿ ಸಂತಾಪ ಹೇಳಲು ಆಗದ ಸಂಸದ ನಳಿನ್ ಕುಮಾರ್ ಕಟೀಲು ಬಶೀರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರ ಸಹಾನುಭೂತಿ ನಮಗೆ ಬೇಕಾಗಿಲ್ಲ. ಮುಸ್ಲಿಮರು ಎಂದೂ ಬೇಡುವವರಲ್ಲ. ಸಂಸದರಿಗೆ ಚುನಾವಣೆಗೆ, ಸಂಘಟನೆಗೆ ಬೇಕಾದರೆ ನಾವು ಹಣ ಕೊಡುತ್ತೇವೆ ಎಂದು ಹಾಜಿ ಹಮೀದ್ ಕಂದರ್ ಸವಾಲು ಹಾಕಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News