ಉಡುಪಿ: ಬಿಜೆಪಿ ಜೈಲ್ ಭರೋಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಲೇವಡಿ
ಉಡುಪಿ, ಜ.12: ದೇಶದ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಇವರ ಪೂರ್ವಜರಾರೂ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗಿಲ್ಲ. ಈಗಿನ ಸಂತತಿಯಾದರೂ ಜೈಲಿಗೆ ಹೋಗಲಿ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿಯ ಜೈಲ್ ಭರೋ ಘೋಷಣೆಗೆ ಲೇವಡಿ ಮಾಡಿದ್ದಾರೆ.
ಬ್ರಹ್ಮಾವರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ರಾಮಲಿಂಗಾ ರೆಡ್ಡಿ, ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಆರ್‌ಎಸ್‌ಎಸ್, ಬಿಜೆಪಿ ಉಗ್ರ ಸಂಘಟನೆಗಳೆಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬಿಜೆಪಿ ಹಮ್ಮಿಕೊಂಡ ಜೈಲ್ ಭರೊ ಕಾರ್ಯಕ್ರವುಕ್ಕೆ ಅವರು ಪ್ರತಿಕ್ರಿಯಿಸುತಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟಿಸುವ, ವಿರೋಧಿಸುವ ಹಕ್ಕಿದೆ. ಆದರೆ ಅದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಶಾಂತಿಯುತ ವಾಗಿ ನಡೆಯಲಿ. ಅವರು ಧರಣಿಯನ್ನಾದರೂ ಮಾಡಲಿ, ಜೈಲ್ ಭರೊ ಆದರೂ ಮಾಡಲಿ. ಅದರ ಬಗ್ಗೆ ನಾವು ಏನೂ ಹೇಳಲ್ಲ. ಆದರೆ ಶಾಂತಿ ಕದಡಲು ಕುಮ್ಮಕ್ಕು ನೀಡಬಾರದು ಅಷ್ಟೇ ಎಂದರು.
ರಾಜ್ಯದ 30 ಜಿಲ್ಲೆಗಳ ಪೈಕಿ ಉಡುಪಿ ಸಹಿತ 29 ಜಿಲ್ಲೆಗಳಲ್ಲಿ ಶಾಂತಿ ನೆಲೆಸಿದೆ. ಆದರೆ ಕರಾವಳಿಯ ದ.ಕ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಕೋಮುವಾದಿ ಸಂಘಟನೆಗಳೇ ಕಾರಣ. ಸಂಘಟನೆಗಳು ಸುಮ್ಮನಾದರೆ ಎಲ್ಲವೂ ನಿಯಂತ್ರಣದಲ್ಲಿ ಇರುತ್ತದೆ ಎಂದರು.
ಕರಾವಳಿಯಲ್ಲಿ ಪೊಲೀಸ್ ವ್ಯವಸ್ಥೆ ಬಲಿಷ್ಠವಾಗಿದೆ, ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ಪಿಎಫ್ಐ, ಎಸ್‌ಡಿಪಿಐ, ಬಜರಂಗದಳ ಸಹಿತ ಇತರೆ ಸಂಘಟನೆಗಳು ಈ ಭಾಗದಲ್ಲಿ ಚುರುಕಾಗಿವೆ. ಈ ಸಂಘಟನೆಗಳ ಚುರುಕುತನ ಕಡಿಮೆಯಾದರೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಇಲ್ಲಿನ ಜನರಿಗೆ ಕೋಮು ಸಂಘರ್ಷ, ಶಾಂತಿ ಹಾಳು ಮಾಡುವವರು ಬೇಕಿಲ್ಲ. ಇದೇ ಪರಿಸ್ಥಿತಿ ಮುಂದು ವರಿದರೆ ಜನರೇ ಸಂಘಟನೆಗಳನ್ನು ದೂರವಿಡುವ ಕಾಲ ಬರಲಿದೆ ಎಂದು ಗೃಹ ಸಚಿವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ, ಗಲಭೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ. ಇಂಥವರನ್ನು ಹುಡುಕಿ ಹುಡುಕಿ ಕಂಡು ಹಿಡಿದು ಬಂಧಿಸುವಂತೆ ಸೂಚಿಸಿದ್ದೇವೆ. ಅಲ್ಲದೆ ಇವುಗಳಿಗೆ ವ್ಯಾಪಕ ಪ್ರಚಾರ ನೀಡುವಂತೆಯೂ ಹೇಳಿದ್ದೇವೆ ಎಂದರು.
ಕೋಮು ಪ್ರಕ್ಷುಬ್ಧತೆಗೆ ಕಾರಣವಾಗುವ ಸಂಘಟನೆಗಳ ನಿಷೇಧದ ವಿಚಾರ ಸದ್ಯಕ್ಕೆ ಪ್ರಸ್ತಾಪವಿಲ್ಲ. ಆದರೆ ಇಂಥ ಸಂಘಟನೆಗಳ ನಿಷೇಧದ ಬಗ್ಗೆ ಚರ್ಚೆ ಯಂತೂ ನಡೆಯುತ್ತಿದೆ. ಸಿಎಂ ಪ್ರವಾಸದಲ್ಲಿದ್ದು, ಮರಳಿ ಬಂದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ತೀವಿ. ನಿಷೇಧ ಮಾಡುವುದಾದರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು. ಒಂದು ಕಡೆ ಮಾಡಿ, ಇನ್ನೊಂದು ಕಡೆ ಮಾಡದೇ ಇರಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚಿಸಿ, ವಿಸ್ಕೃತ ವರದಿ ತಯಾರಿಸಿ, ಶಾಂತಿ ಭಂಗ ಮಾಡುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ತೀವಿ ಎಂದರು.
ಬಿಜೆಪಿ ನಾಯಕರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಹತ್ತಾರು ಬಾರಿ ಶಾಂತಿಗೆ ಭಂಗ ತಂದಾಗ ಅವರನ್ನು ನಿಯಂತ್ರಿಸಿದ್ದೇವೆ. ನಾವು ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ ದ.ಕ. ಈಗಾಗಲೇ ಹೊತ್ತಿ ಉರಿಯುತ್ತಿತ್ತು. ಮಂಗಳೂರಿನ ರ್ಯಾಲಿ ಹಾಗೂ ಮೈಸೂರಿನ ಹನುಮ ಜಯಂತಿ ತಡೆದಿದ್ದೇವೆ. ಎರಡೂ ಕಡೆಯ ಸಂಘಟನೆಗಳು ನೆಮ್ಮದಿಯಲ್ಲಿದ್ದರೆ ಜನ ಕೂಡಾ ನೆಮ್ಮದಿಯಲ್ಲಿರುತ್ತಾರೆ ಎಂದವರು ಪುನರುಚ್ಚರಿಸಿದರು.
ಸನ್ನಿ ಲಿಯೋ ಪ್ರದರ್ಶನ: ಸನ್ನಿ ನೈಟ್ಸ್‌ಗೆ ಅನುಮತಿ ನಿರಾಕರಣೆಗೂ, ಕನ್ನಡ ಪರ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ಭದ್ರತೆ ದೃಷ್ಟಿಯಿಂದ ಬೆಂಗಳೂರು ಪೊಲೀಸ್ ಕಮಿಷನರ್‌ರ ನಿರ್ಧಾರದಂತೆ ಅನುಮತಿ ರದ್ದು ಮಾಡಲಾಗಿತ್ತು. ಮುಂದೆ ಸನ್ನಿ ಲಿಯೋ ಆಗಮಿಸಿದರೆ ಅವಕಾಶ ಮಾಡಿಕೋಡ್ತೆವೆ. ಅವರು ಫೆಬ್ರವರಿ, ಮಾರ್ಚ್ ಯಾವ ತಿಂಗಳಿನಲ್ಲಿ ಬೇಕಿದ್ದರೂ ಶೋ ಮಾಡಲಿ ಎಂದರು.
ಎಲ್ಲಾ ಪ್ರಾರ್ಥನಾ ಮಂದಿರಕ್ಕೆ ಭೇಟಿ: ನಾನು ಯಾವುದೇ ಪ್ರಾರ್ಥನಾ ಮಂದಿರಕ್ಕೂ ಹೋಗಲು ಸಿದ್ಧನಿದ್ದೇನೆ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ಉಡುಪಿಗೆ ಬಂದರೂ ಶ್ರೀಕೃಷ್ಣ ಮಠಕ್ಕೆ ಹೋಗದಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದರು. ಈ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದರು.
ನಾನು ದೇವಸ್ಥಾನ, ಮಸೀದಿ, ಚರ್ಚ್, ಜೈನ ಮಂದಿರ ಯಾವುದಕ್ಕೂ ಕರೆದರೂ ಹೋಗುತ್ತೇನೆ. ಇವತ್ತು ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಖಂಡಿತ ವಾಗಿಯೂ ಹೋಗುತ್ತೇನೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರವೆದ್ ಮಧ್ವರಾಜ್ ಉಪಸ್ಥಿತರಿದ್ದರು.