ನೀರ್ಜಾ ಬಾನೊಟ್ ಹತ್ಯೆ: ವಿಮಾನ ಅಪಹರಣಕಾರರ ಇತ್ತೀಚಿನ ಭಾವಚಿತ್ರ ಬಿಡುಗಡೆ ಮಾಡಿದ ಎಫ್‌ಬಿಐ

Update: 2018-01-12 16:18 GMT

ವಾಶಿಂಗ್ಟನ್, ಜ.12: 1986ರಲ್ಲಿ ನಡೆದ ಪಾನ್ ಆಮ್ ವಿಮಾನ ಅಪಹರಣದ ಆರೋಪಿಗಳ ಇತ್ತೀಚಿನ ಭಾವಚಿತ್ರವನ್ನು ಅಮೆರಿಕದ ಸಂಯುಕ್ತ ತನಿಖಾ ಮಂಡಳಿ (ಎಫ್‌ಬಿಐ) ಬಿಡುಗಡೆ ಮಾಡಿದೆ. ಈ ಘಟನೆಯಲ್ಲಿ ಭಾರತ ಮೂಲದ ವಿಮಾನ ಪರಿಚಾರಕಿ ನೀರ್ಜಾ ಬಾನೊಟ್ ಸೇರಿದಂತೆ ಇಪ್ಪತ್ತು ಮಂದಿ ಸಾವನ್ನಪ್ಪಿದ್ದರು.

ಅಪಹರಣಕಾರರನ್ನು ಮದೂದ್ ಮುಹಮ್ಮದ್ ಹಾಫೀಝ್ ಅಲ್ ತುರ್ಕಿ, ಜಮಲ್ ಸಯೀದ್ ಅಬ್ದುಲ್ ರಹೀಮ್, ಮುಹಮ್ಮದ್ ಅಬ್ದುಲ್ಲಾ ಖಲೀಲ್ ಹುಸೈನ್ ಅರ್ ರಹಯ್ಯಲ್ ಮತ್ತು ಮುಹಮ್ಮದ್ ಅಹ್ಮದ್ ಅಲ್ ಮುನವ್ವರ್ ಎಂದು ಗುರುತಿಸಲಾಗಿದೆ.

ಅಪಹರಣಕಾರರ ಹೊಸ ಭಾವಚಿತ್ರಗಳನ್ನು ಎಫ್‌ಬಿಐಯ ಪ್ರಯೋಗಾಲಯದಲ್ಲಿ ಏಜ್-ಪ್ರೊಗ್ರೆಶನ್ ತಂತ್ರಜ್ಞಾನವನ್ನು ಬಳಸಿ ರೂಪಿಸಲಾಗಿದೆ. ಆರೋಪಿಗಳ ನೈಜ ಭಾವಚಿತ್ರಗಳನ್ನು 2000ನೇ ಇಸವಿಯಲ್ಲಿ ಎಫ್‌ಬಿಐ ವಶಪಡಿಸಿಕೊಂಡಿತ್ತು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಭಾವಚಿತ್ರಗಳಲ್ಲಿ ಆರೋಪಿಗಳು ಇಷ್ಟು ವರ್ಷಗಳ ನಂತರ ಹೇಗೆ ಕಾಣಿಸುತ್ತಿರಬಹುದು ಎಂಬುದನ್ನು ಊಹಿಸಲಾಗಿದೆ.

1986ರ ಸೆಪ್ಟೆಂಬರ್ 5ರಂದು 379 ಪ್ರಯಾಣಿಕರನ್ನು ಹೊತ್ತು ಮುಂಬೈಯಿಂದ ತೆರಳಿದ್ದ ಪಾನ್ ಆಮ್ ಫ್ಲೈಟ್ 73 ವಿಮಾನವನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಈ ಘಟನೆಯಲ್ಲಿ 20 ಪ್ರಯಾಣಿಕರು ಮತ್ತು ಸಿಬ್ಬಂದಿ ಹತ್ಯೆಗೀಡಾಗಿದ್ದರು.

      (ನೀರ್ಜಾ ಬಾನೊಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News