×
Ad

ಮೋದಿ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ: ಪ್ರತಾಪ ಸಿಂಹ

Update: 2018-01-12 21:04 IST

ಉಡುಪಿ, ಜ.12: ಕೇಂದ್ರ ಸರಕಾರ ದುಬಾರಿ ಬೆಲೆಯಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ರಾಜ್ಯಕ್ಕೆ ನೀಡಿದರೆ, ಕರ್ನಾಟಕ ಮುಖ್ಯಮಂತ್ರಿ ಆಹಾರದ ಪ್ಯಾಕ್‌ನಲ್ಲಿ ಕೇವಲ ತನ್ನ ಭಾವಚಿತ್ರ ಹಾಕಿ ಪ್ರಚಾರ ತೆಗೆದುಕೊಳ್ಳುತಿದ್ದಾರೆ. ಒಟ್ಟಾರೆ ಮೋದಿ ದುಡ್ಡಿನಲ್ಲಿ ಸಿದ್ದು ಜಾತ್ರೆ ಮಾಡುತಿದ್ದಾರೆ ಎಂದು ಮೈಸೂರಿನ ಸಂಸದ ಪ್ರತಾಪಸಿಂಹ ಆರೋಪಿಸಿದ್ದಾರೆ.

ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಶುಕ್ರವಾರ ಚಿಟ್ಪಾಡಿಯ ಯು.ಎಸ್.ನಾಯಕ್ ಸ್ಮಾರಕ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೋದಿ-ಫೈಯಿಂಗ್ ಕರ್ನಾಟಕ’ಕ್ಕೆ ಚಾಲನೆ ನೀಡಿ ಮಾತನಾಡುತಿದ್ದರು.

ರಾಜ್ಯದಲ್ಲಿ ಬಿಜೆಪಿಯ ಯಡ್ಡಿಯೂರಪ್ಪ ಆಡಳಿತವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತಿದ್ದಾರೆ. ಭಾಗ್ಯಲಕ್ಷ್ಮೀ, ಬಸವ ವಸತಿ, ನಮ್ಮ ಮನೆ ನಮ್ಮ ಗ್ರಾಮ ದಂತಹ ಯೋಜನೆಗಳ ಜನಪ್ರಿಯತೆಯೇ ಇದಕ್ಕೆ ಸಾಕ್ಷಿ. ಆದರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಜಯಂತಿ ಹಾಗೂ ಉಡಾಫೆ ಉತ್ತರಗಳಿಗಾಗಿ ಮಾತ್ರ ಜನರು ಗುರುತಿಸುತ್ತಾರೆ ಎಂದರು.

ಜೈಲಿಗೆ ಹೋದವರು ಎಂದು ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಸದಾ ಟೀಕಿಸುತ್ತಿರುತ್ತಾರೆ. ಹಾಗಿದ್ದರೆ ಇಂದಿರಾಗಾಂಧಿ ಏನು ಅರಮನೆಗೆ ಹೋಗಿದ್ದರೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವಂತಾಗಬೇಕು. ಆ ಮೂಲಕ 2019ರ ಚುನಾವಣೆಗೆ ಕೇಂದ್ರ ಸರಕಾರದ ಆಸ್ತಿತ್ವಕ್ಕೆ ಕರ್ನಾಟಕ ತನ್ನ ಕೊಡುಗೆಯನ್ನು ನೀಡಬೇಕು ಎಂದರು. ದಿಲ್ಲಿ ಬಿಜೆಪಿಯ ವಕ್ತಾರ ಹಾಗೂ ಮೋದಿ-ಫೈಯಿಂಗ್ ಇಂಡಿಯಾದ ಸಂಚಾಲಕ ತಜಿಂದರ್ ಪಾಲ್ ಸಿಂಗ್ ಬಗ್ಗೆ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ಆಡಳಿತ ಆರಂಭವಾದ ಬಳಿಕ ದೇಶ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News