ಮೃತ ದೀಪಕ್, ಬಶೀರ್ ಮನೆಗೆ ಗೃಹ ಸಚಿವರ ಭೇಟಿ: ಸೂಕ್ತ ತನಿಖೆ ನಡೆಸಿ ಕ್ರಮ

Update: 2018-01-12 18:49 GMT

ಮಂಗಳೂರು, ಜ. 12: ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ಕಾಟಿಪಳ್ಳದ ಮೃತ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ದೀಪಕ್ ನಿವಾಸಕ್ಕೆ ಭೇಟಿ ನೀಡಿದ ಅವರು ಮೃತ ದೀಪಕ್ ರಾವ್ ಅವರ ತಾಯಿ ಹಾಗೂ ಸಹೋದರರನ್ನು ಸಾಂತ್ವನ ಹೇಳಿದರು. ಕೊಲೆ ತನಿಖೆಯ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಭರವಸೆ ನೀಡಿದರು.

ಶಾಸಕರ ನಿವಾಸಕ್ಕೆ ಭೇಟಿ

ಬಳಿಕ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾ ಅವರು ಸಚಿವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಚಿವರು ಶಾಸಕ ಮೊದಿನ್ ಬಾವಾರ ನಿವಾಸಕ್ಕೆ ತೆರಳಿ ಬಾವಾರೊಂದಿಗೆ ಕೆಲವು ಹೊತ್ತು ಮಾತುಕತೆ ನಡೆಸಿದರು. ಅನಂತರ ಆಕಾಶಭವನದ ಅಬ್ದುಲ್ ಬಶೀರ್ ಅವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಶೀರ್ ಅವರ ಕುಟುಂಬ ಸದಸ್ಯರು ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಕೊಲೆ ಹಿಂದಿರು ಶಕ್ತಿಗಳ ವಿರುದ್ದವೂ ಕ್ರಮ ಜರಗಿಸಿ ದ.ಕ. ಜಿಲ್ಲೆಯಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಶೀರ್ ಕುಟುಂಬವು ಆಗ್ರಹಿಸಿದಂತೆ ಕೊಲೆ ಹಾಗೂ ಅದರ ಹಿಂದಿರುವ ಶಕ್ತಿಯ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ಅದರಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬಶೀರ್ ಅವರ ಕುಟುಂಬ ಯಾವುದೇ ಬೇಡಿಕೆ ಇಟ್ಟಿಲ್ಲ. ಯಾವ ಆರೋಪಿಗಳ ಹೆಸರನ್ನೂ ಹೇಳಿಲ್ಲ ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾ, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ದೀಪಕ್ ಪೂಜಾರಿ, ಭಾಸ್ಕರ್ ಮೊಲಿ, ಅಲ್ತಾಫ್, ಜಲೀಲ್, ಕೇಶವ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.

‘ಬಿಜೆಪಿಯವರದ್ದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ’ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುತುವರ್ಜಿ ವಹಿಸಿದಂತೆ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಬಿಜೆಪಿಯವರದ್ದೇ ಸರಕಾರ ಇದ್ದಾಗ ಅವರಿಗೆ ಆಚರಣೆ ಮಾಡಬಹುದಿತಲ್ಲ. ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಗಲಾಟೆಗೆ ಯತ್ನಿಸಿದ್ದಾರೆ. ಆದರೆ, ಅದಕ್ಕೆ ಸರಕಾರ ಅವಕಾಶ ನೀಡಿಲ್ಲ ಎಂದರು. ಸ್ವಾಮಿ ವಿವೇಕಾನಂದ ಅವರು ಕೋಮು, ಜಾತಿಗೆ ಸೀಮಿತರಾದವರಲ್ಲ. ಅವರು ಅದನ್ನು ಮೀರಿದವರು. ವಿವೇಕಾನಂದರ ಜಯಂತಿ ಆಚರಣೆಯ ಬಗ್ಗೆ ಯೋಚಿಸುತ್ತೇವೆ ಎಂದು ಸಚಿವರು ಹೇಳಿದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News