ಅಯೋಧ್ಯೆ ವಿವಾದಕ್ಕೆ ಶಾಂತಿಯುತ ಪರಿಹಾರ ಸಾಧ್ಯ : ಜೆ.ಎಸ್.ಖೇಹರ್

Update: 2018-01-12 17:08 GMT

ಹೊಸದಿಲ್ಲಿ, ಜ.12: ಅಯೋಧ್ಯೆ ವಿವಾದಕ್ಕೆ ಶಾಂತಿಯುತ ಪರಿಹಾರ ಹುಡುಕಬೇಕು ಎಂದು ಭಾರತದ ಮಾಜಿ ಸಿಜೆಐ(ಮುಖ್ಯ ನ್ಯಾಯಾಧೀಶ) ಜೆ.ಎಸ್.ಖೇಹರ್ ತಿಳಿಸಿದ್ದಾರೆ.

ದೇಶದ ವಿಭಜನೆ ಸಂದರ್ಭ ಹಿಂದೂ ಮತ್ತು ಮುಸ್ಲಿಮ್ ಈ ಎರಡೂ ಸಮುದಾಯದವರು ಭಾರೀ ಹಿಂಸಾಚಾರದ ಕಾರಣದಿಂದ ನಲುಗಿದ್ದಾರೆ. ಪಾಕಿಸ್ತಾನವು ಇಸ್ಲಾಮಿಕ್ ದೇಶವಾದ ಕಾರಣ ಭಾರತ ದೇಶವು ಸ್ವತಂತ್ರಗೊಂಡ ಬಳಿಕ ಸಂಪೂರ್ಣ ಜಾತ್ಯಾತೀತತೆಯನ್ನು ಆಯ್ದುಕೊಂಡಿದೆ ಎಂದು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿ ಉಪನ್ಯಾಸ ನೀಡಿದ ಖೇಹರ್ ತಿಳಿಸಿದರು. ಆದರೆ ಈಗ ಅದೆಲ್ಲವನ್ನೂ ಮರೆತು ‘ಮುಯ್ಯಿಗೆ ಮುಯ್ಯಿ’ ಎಂಬಂತೆ ವರ್ತಿಸುತ್ತಿದ್ದೇವೆ ಎಂದು ಖೇಹರ್ ವಿಷಾದ ವ್ಯಕ್ತಪಡಿಸಿದರು. ತಾನು ಸಿಜೆಐ ಆಗಿದ್ದಾಗ ಅಯೋಧ್ಯೆ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ರೂಪಿಸುವ ಪ್ರಸ್ತಾವ ಮುಂದಿರಿಸಿದ್ದನ್ನು ನೆನಪಿಸಿಕೊಂಡ ಅವರು , ಯುದ್ದ ಸಮಸ್ಯೆಗೆ ಪರಿಹಾರವಲ್ಲ, ಸೌಹಾರ್ದಪೂರ್ಣ ಮಾತುಕತೆಯಿಂದ ಯಾವುದೇ ವಿವಾದ ಪರಿಹರಿಸಬಹುದು ಎಂದು ಹೇಳಿದರು.

   ಜಾತ್ಯಾತೀತ ದೇಶವಾಗಿರುವ ಭಾರತ ಜಾಗತಿಕ ಶಕ್ತಿ ಎನಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇಂದಿನ ದಿನದಲ್ಲಿ ಜಾಗತಿಕ ಶಕ್ತಿ ಎನಿಸಿಕೊಳ್ಳಬೇಕಿದ್ದರೆ ಕೋಮುವಾದಿಗಳಾಗಿರಲು ಸಾಧ್ಯವಿಲ್ಲ . ಮುಸ್ಲಿಮರೊಂದಿಗೆ ಸ್ನೇಹದಿಂದಿರಲು ಬಯಸುವಿರಾದರೆ ಮುಸ್ಲಿಮ್ ವಿರೋಧಿಗಳಾಗಿರಬಾರದು, ಕ್ರಿಶ್ಚಿಯನ್ನರೊಂದಿಗೆ ಸ್ನೇಹದಿಂದಿರಲು ಬಯಸುವಿರಾದರೆ ಕ್ರಿಶ್ಚಿಯನ್ ವಿರೋಧಿಗಳಾಗಿರಬಾರದು. ಆದರೆ ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಖೇಹರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News