ಮಂಗಳೂರು ವಿವಿ ಅಂತರ್ ಕಾಲೇಜು ಅತ್ಲೆಟಿಕ್ ಕ್ರೀಡಾಕೂಟ: ಸಮಾರೋಪ ಸಮಾರಂಭ

Update: 2018-01-12 16:40 GMT

ಮಂಗಳೂರು, ಜ. 12:  ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅತ್ಲೆಟಿಕ್ ಕ್ರೀಡಾಕೂಟವು ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಗರದ ಕ್ರೀಡಾ ವಿಭಾಗದ ಸಹಭಾಗಿತ್ವದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ಅವರು, ಸದ್ರಿ ಕ್ರೀಡಾಕೂಟದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಭವಿವ್ಯವನ್ನು ಕಾಣಬಹುದು ಎಂದರು.

ಕ್ರೀಡಾ ಕೂಟದ ಹಲವು ವಿಭಾಗಗಳಲ್ಲಿ ವಿಜೇತರಾದವರಿಗೆ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ದ.ಕ. ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ಅಧಿಕಾರಿ ಲಿಲ್ಲಿ ಪಾಯಸ್ ಮಾತನಾಡಿ, ಸರಕಾರಿ ಕಾಲೇಜಿನವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿರುವುದಕ್ಕೆ ಕಾಲೇಜನ್ನು ಅಭಿನಂದಿಸಿದರು. ಅಲ್ಲದೆ, ವಿದ್ಯಾರ್ಥಿಗಳು ಇನ್ನೂ ಹಲವು ದಾಖಲೆಗಳನ್ನು ಮುಂದಿನ ವರ್ಷಗಳಲ್ಲಿ ನಿರ್ಮಿಸುವಂತಾಗಲಿ ಎಂದು ಹಾರೈಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರು ವಿಶ್ವವಿದ್ಯಾನಿಲಯದ ಪರವಾಗಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಈ ಬಾರಿ 68 ಕಾಲೇಜುಗಳಿಂದ 950ಕ್ಕೂ ಮಿಕ್ಕಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ದಾಖಲೆ ನಿರ್ಮಿಸಿದರು. ಭಿನ್ನ ಸಾಮರ್ಥ್ಯದ ಕ್ರೀಡಾಕೂಟದಲ್ಲಿ 8 ವಿವಿಧ ಸಂಸ್ಥೆಗಳಿಂದ 210ಕ್ಕೂ ಹೆಚ್ಚು ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಎಂ.ಪಿ.ಎಡ್ ವಿದ್ಯಾರ್ಥಿಗಳು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ್ದರು. ಅತ್ಯುತ್ತಮ ಕ್ರೀಡಾಪಟು ಪುರುಷರ ವಿಭಾಗದಲ್ಲಿ 6 ಹಾಗೂ ಮಹಿಳಾ ವಿಭಾಗದಲ್ಲಿ 5 ಹೊಸ ದಾಖಲೆಗಳು ನಿರ್ಮಾಣಗೊಂಡವು. ಅತ್ಯುತ್ತಮ ಪುರುಷ ಕ್ರೀಡಾಪಟುವಾಗಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಇಳಾಕ್ಕಿಯದಾಸನ್ ಹಾಗೂ ಅತ್ಯುತ್ತಮ ಮಹಿಳಾ ಕ್ರೀಡಾಪಟುವಾಗಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ನೇಹಾ ಎಸ್.ಎಸ್. ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪುರುಷ ವಿಭಾಗದಲ್ಲಿ ದ್ವಿತೀಯ ಅತ್ಯುತ್ತಮ ಕಾಲೇಜಾಗಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ಮೂಡಿಬಂದಿದ್ದು, ಪ್ರಥಮ ಸ್ಥಾನವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪಡೆದಿದೆ. ಮಳೆಯರ ವಿಭಾಗದಲ್ಲಿ ದ್ವಿತೀಯ ಅತ್ಯುತ್ತಮ ಕಾಲೇಜಾಗಿ ಉಜಿರೆಯ ಎಸ್.ಡಿ.ಎಂ. ಕಾಲೇಜು ಮೂಡಿಬಂದಿದ್ದು ಪ್ರಥಮ ಸ್ಥಾನವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪಡೆದಿದೆ.

ಸಮಗ್ರ ಪ್ರಶಸ್ತಿ

ಕ್ರೀಡಾ ಕೂಟದ ಸಮಗ್ರ ಪ್ರಶಸ್ತಿನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ತನ್ನದಾಗಿರಿಸಿಕೊಂಡಿದೆ. ಪ್ರಥಮ ಬಾರಿಗೆ ಪರಿಚಯಿಸಲ್ಪಟ್ಟ ಸರಕಾರಿ ಕಾಲೇಜುಗಳ ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಅತಿಥೇಯ ಕಾಲೇಜಾದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News