ಬ್ರಿಟನ್ ಪ್ರವಾಸ ರದ್ದು ಮಾಡಿದ ಡೊನಾಲ್ಡ್ ಟ್ರಂಪ್: ಒಬಾಮ ಮೇಲೆ ಟೀಕಾ ಪ್ರಹಾರ

Update: 2018-01-12 17:13 GMT

ವಾಶಿಂಗ್ಟನ್, ಜ.12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ರಾಯಭಾರ ಕಚೇರಿಯನ್ನು ತೆರೆಯುವ ಸಲುವಾಗಿ ಮುಂದಿನ ತಿಂಗಳು ತೆರಳಲು ನಿಗದಿಪಡಿಸಿದ್ದ ಲಂಡನ್ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಜೊತೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಟ್ರಂಪ್, ಹಳೆಯ ರಾಯಭಾರ ಕಚೇರಿಯನ್ನು ಒಬಾಮ ಕಡಲೆಕಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗಿ ಒಂದು ವರ್ಷಗಳೇ ಕಳೆದರೂ ಟ್ರಂಪ್ ಇನ್ನು ಕೂಡಾ ಲಂಡನ್‌ಗೆ ಭೇಟಿ ನೀಡಿಲ್ಲ. ಅವರು ತಮ್ಮ ಹಲವು ವೌಲ್ಯಗಳಿಗೆ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದ ಬಹಳಷ್ಟು ಬ್ರಿಟಿಷ್ ಪ್ರಜೆಗಳು ಟ್ರಂಪ್ ಲಂಡನ್‌ಗೆ ಆಗಮಿಸಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

 ನಾನು ಈ ಪ್ರವಾಸವನ್ನು ರದ್ದು ಮಾಡಿರುವ ಒಂದೇ ಕಾರಣವೆಂದರೆ ನಾನು ಹಿಂದಿನ ಒಬಾಮ ಸರಕಾರದ ದೊಡ್ಡ ಅಭಿಮಾನಿಯಲ್ಲ. ಅವರು ಲಂಡನ್‌ನ ಅತ್ಯುತ್ತಮ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ರಾಯಭಾರ ಕಚೇರಿಯನ್ನು ಕಡಲೆಕಾಯಿ ಬೆಲೆಗೆ ಮಾರಾಟ ಮಾಡಿ ಯಾವುದೋ ಒಳಪ್ರದೇಶದಲ್ಲಿ 1.2 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ. ಇದೊಂದು ಕೆಟ್ಟ ಒಪ್ಪಂದ. ಅದರ ಉದ್ಘಾಟನೆಯನ್ನು ನಾನು ಮಾಡಬೇಕೇ? ಸಾಧ್ಯವಿಲ್ಲ ಎಂದು ಟ್ರಂಪ್ ಕಿಡಿಕಾರಿದ್ದಾರೆ.

2008ರಲ್ಲಿ ಜಾರ್ಜ್ ಬುಶ್ ಅವರು ಅಧ್ಯಕ್ಷರಾಗಿದ್ದಾಗ ಮೇಫೇರ್‌ನಲ್ಲಿರುವ ಗ್ರೊಸ್ವೆನೊರ್ ಸ್ಕ್ವ್ಯಾರ್ ಕಟ್ಟಡವನ್ನು ಮಾರಾಟ ಮಾಡುವ ಥೇಮ್ಸ್ ನದಿಯ ದಕ್ಷಿಣ ದಂಡೆಯ ಮೇಲೆ ನೂತನ ಲಂಡನ್ ರಾಯಭಾರ ಕಚೇರಿಯನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

2009ರಲ್ಲಿ ಬ್ರಿಟನ್ ಯೂರೋಪ್ ಒಕ್ಕೂಟದಿಂದ ಹೊರಬಂದು ನೂತನ ವ್ಯಾಪಾರ ಒಪ್ಪಂದಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಅಮೆರಿಕ ಜೊತೆಗೆ ಅದು ಹಂಚಿಕೊಂಡಿದ್ದ ವಿಶೇಷ ಸಂಬಂಧ ಪ್ರಾಮುಖ್ಯತೆ ಪಡೆದುಕೊಂಡಿತ್ತು.

ಆದರೆ ಅಮೆರಿಕ ಪ್ರವೇಶಿಸುವ ಮುಸ್ಲಿಮರ ಮೇಲೆ ನಿರ್ಬಂಧ ಹೇರುವ ಟ್ರಂಪ್ ಆಡಳಿತದ ಪ್ರಸ್ತಾಪ ಮತ್ತು ಬ್ರಿಟಿಷ್ ಪ್ರಧಾನಿ ತೆರೆಸಾ ಮೇ ಅವರನ್ನು ಟ್ವಿಟರ್‌ನಲ್ಲಿ ಟೀಕಿಸಿದ ಟ್ರಂಪ್ ಉದ್ದಟತನದಿಂದಾಗಿ ಹಲವು ಹಿರಿಯ ಬ್ರಿಟಿಷ್ ಅಧಿಕಾರಿಗಳು ಡೊನಾಲ್ಡ್ ಟ್ರಂಪ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News