ಹೀನ ಪದ ಬಳಕೆ: ಟ್ರಂಪ್ ವಿರುದ್ಧ ಆಕ್ರೋಶ

Update: 2018-01-13 17:41 GMT

ನ್ಯೂಯಾರ್ಕ್, ಜ.13: ಆಫ್ರಿಕದ ರಾಷ್ಟ್ರಗಳ ವಲಸಿಗರ ವಿರುದ್ಧ ಜನಾಂಗೀಯ ನಿಂದನೆಯ ಕೀಳುಮಾತುಗಳನ್ನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕೆಂದು ಆಫ್ರಿಕದ ಎಲ್ಲಾ ರಾಷ್ಟ್ರಗಳ ವಿಶ್ವಸಂಸ್ಥೆ ರಾಯಭಾರಿಗಳು ಶುಕ್ರವಾರ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಆಫ್ರಿಕದ ರಾಷ್ಟ್ರಗಳನ್ನು ‘ಶಿಟ್‌ಹೋಲ್ ದೇಶ’ಗಳೆಂಬ ನಿಂದನಾತ್ಮಕ ಪದಬಳಕೆ ಮಾಡಿದ್ದ ಟ್ರಂಪ್, ಆ ರಾಷ್ಟ್ರಗಳಿಂದ ಜನರು ಅಮೆರಿಕಕ್ಕೆ ವಲಸೆ ಬರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಟ್ರಂಪ್‌ರ ವಿವಾದಾತ್ಮಕ ಹೇಳಿಕೆ ವಿರುದ್ಧ ವಿಶ್ವಸಂಸ್ಥೆಯ ಆಫ್ರಿಕನ್ ರಾಷ್ಟ್ರಗಳ ರಾಯಭಾರಿಗಳ ಒಕ್ಕೂಟವು ಇಂದು ನಿರ್ಣಯವೊಂದನ್ನು ಅಂಗೀಕರಿಸಿದ್ದು,‘‘ಅಮೆರಿಕ ಅಧ್ಯಕ್ಷರ ಉದ್ಧಟತನದ, ಜನಾಂಗೀಯವಾದಿ ಹಾಗೂ ದ್ವೇಷಯುತವಾದ ಹೇಳಿಕೆಗಳಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ ಹಾಗೂ ಅದನ್ನು ಬಲವಾಗಿ ಖಂಡಿಸುತ್ತೇವೆ’’ ಎಂದು ಹೇಳಿದೆ.

  ‘‘ಆಫ್ರಿಕಾ ಖಂಡ ಹಾಗೂ ಆಫ್ರಿಕಾ ಮೂಲದವರನ್ನು ಕೀಳಾಗಿ ಕಾಣುವ ಅಮೆರಿಕ ಆಡಳಿತದ ಪ್ರವೃತ್ತಿಯ ಬಗ್ಗೆ ಆತಂಕಗೊಂಡಿದ್ದೇವೆ’’ ಎಂದು ಹೇಳಿಕೆ ತಿಳಿಸಿದೆ.

ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಆಫ್ರಿಕ ರಾಷ್ಟ್ರಗಳ ವಿಶ್ವಸಂಸ್ಥೆ ರಾಯಭಾರಿಗಳ ಒಕ್ಕೂಟವು ಶುಕ್ರವಾರ ತುರ್ತು ಅಧಿವೇಶನವನ್ನು ಕರೆದಿತ್ತು.

ಅಮೆರಿಕದ ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕೆಂದು ನಿರ್ಣಯವನ್ನು ಅಂಗೀಕರಿಸಿರುವ 54 ಆಫ್ರಿಕನ್ ರಾಷ್ಟ್ರಗಳ ವಿಶ್ವಸಂಸ್ಥೆ ರಾಯಭಾರಿಗಳ ಒಕ್ಕೂಟವು,ಅಮೆರಿಕನ್ನರು ಸೇರಿದಂತೆ ಈ ಹೇಳಿಕೆಯನ್ನು ಖಂಡಿಸಿದ ವಿಶ್ವದ ವಿವಿಧ ವರ್ಗಗಳ ಜನರಿಗೂ ಕೃತಜ್ಞತೆಯನ್ನು ಸಲ್ಲಿಸಿದೆ.

ಅಮೆರಿಕದ ಪನಾಮಾ ರಾಯಭಾರಿ ರಾಜೀನಾಮೆ

►ಟ್ರಂಪ್ ನೀತಿಗಳಿಗೆ ವಿರೋಧ

ಪನಾಮದಲ್ಲಿನ ಅಮೆರಿಕ ರಾಯಭಾರಿ ಜಾನ್ ಫಿಲೇ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಅಮೆರಿಕ ಅಧ್ಯಕ್ಷ ಟ್ರಂಪ್ ಕೈಕೆಳಗೆ ಕೆಲಸ ಮಾಡಲು ತನಗೆ ಸಾಧ್ಯವಿಲ್ಲದ ಕಾರಣ ತಾನು ಹುದ್ದೆಯನ್ನು ತೊರೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ಆದಾಗ್ಯೂ ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಸ್ಪಷ್ಟೀಕರಣವೊಂದನ್ನು ನೀಡಿ, 56 ವರ್ಷ ವಯಸ್ಸಿನ ಫೀಲೇ ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆಂದು ತಿಳಿಸಿದೆ.

ಪನಾಮಾಗೆ ನೂತನ ರಾಯಭಾರಿಯ ನೇಮಕಗೊಳ್ಳುವ ತನಕ ಅಮೆರಿಕದಲ್ಲಿನ ದೂತವಾಸದ ಉಪವರಿಷ್ಠರಾದ ರೊಕ್ಸಾನೆ ಕ್ಯಾಬ್ರಾಲ್ ಹಂಗಾಮಿ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಅದು ಹೇಳಿದೆ.

  ಅಮೆರಿಕ ಮೆರೈನ್ ಪಡೆಯ ಮಾಜಿ ಹೆಲಿಕಾಪ್ಟರ್ ಪೈಲಟ್ ಆಗಿರುವ ಫಿಲೇ ಅವರು ಟ್ರಂಪ್ ಅಧ್ಯಕ್ಷರಾದ ಬಳಿಕ ವಿದೇಶಾಂಗ ಸೇವೆಯ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದರು.

  ಫಿಲೇ ಅವರು ತನ್ನ ರಾಜೀನಾಮೆ ಪತ್ರವನ್ನು ವಿವಿಧ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದು, ಅದರಲ್ಲಿ ಅವರು ಕೆಲವು ನೀತಿಗಳಲ್ಲಿ ವಿದೇಶಾಂಗ ಸೇವೆಯ ಕಿರಿಯ ಅಧಿಕಾರಿಯಾಗಿ ತಾನು ರಾಷ್ಟ್ರಾಧ್ಯಕ್ಷ ಹಾಗೂ ಅವರ ಆಡಳಿತಕ್ಕೆ ಕೆಲವು ನೀತಿಗಳಲ್ಲಿ ಸಹಮತವಿಲ್ಲದ ಹೊರತಾಗಿಯೂ ರಾಜಕೀಯರಹಿತವಾಗಿ ಸೇವೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News