ಲಂಡನ್: ಮೇಯರ್ ಸಾದಿಕ್ ಖಾನ್ ಭಾಷಣಕ್ಕೆ ಅಡ್ಡಿಪಡಿಸಿದ ಟ್ರಂಪ್ ಬೆಂಬಲಿಗರನ್ನು ಹೊರದಬ್ಬಿದ ಪೊಲೀಸರು

Update: 2018-01-14 07:33 GMT

ಲಂಡನ್, ಜ.14:  ಟ್ರಂಪ್ ಬೆಂಬಲಿಗರ ಗುಂಪೊಂದು ಲಂಡನ್‍ನ ಪ್ರಪ್ರಥಮ ಮುಸ್ಲಿಂ ಮೇಯರ್ ಸಾದಿಕ್ ಖಾನ್ ಭಾಷಣಕ್ಕೆ ಅಡ್ಡಿಪಡಿಸಿ ಅವರನ್ನು ಬಂಧಿಸಲು ವಿಫಲಯತ್ನ ನಡೆಸಿದ ಘಟನೆ ನಡೆಸಿದೆ.

ಮೇಯರ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದ್ದ ತಂಡವನ್ನು ಪೊಲೀಸರೇ ಹೊರದಬ್ಬಿದ್ದಾರೆ. ಆದರೆ ಈ ಘಟನೆಯಿಂದ ಮೇಯರ್ ಸಾದಿಕ್ ಖಾನ್ ಅವರ ಭಾಷಣ 15 ನಿಮಿಷಗಳ ಕಾಲ ತಡವಾಯಿತು. ಮೇಯರ್ 'ವಿಶ್ವಾಸಘಾತುಕ', 'ದಬ್ಬಾಳಿಕೆ ಮಾಡುವ' ಹಾಗೂ ಡೊನಾಲ್ಡ್ ಟ್ರಂಪ್ ಅವರಿಗೆ ಅಗೌರವ ತೋರುತ್ತಿರುವ ವ್ಯಕ್ತಿ ಎಂದು ಟ್ರಂಪ್ ಬೆಂಬಲಿಗರ ಗುಂಪಿನ ಸದಸ್ಯರು ಘೋಷಣೆಗಳನ್ನು ಕೂಗಿದರು.

ಟ್ರಂಪ್ ಕಳೆದ ವಾರ ದಿಢೀರನೇ ಲಂಡನ್ ಭೇಟಿ ರದ್ದುಪಡಿಸಿದ್ದರು. ಈ ಸುದ್ದಿಯನ್ನು ಸ್ವಾಗತಿಸಿದ್ದ ಸಾದಿಕ್ ಖಾನ್, ಟ್ರಂಪ್ ಸಾಮೂಹಿಕ ಪ್ರತಿಭಟನೆಯ ಭೀತಿಯಿಂದ ಪ್ರವಾಸ ರದ್ದುಪಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಫೆಬಿಯನ್ ಸೊಸೈಟಿಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಾದಿಕ್ ಖಾನ್ ಮಾತನಾಡುತ್ತಿರುವಾಗ ಈ ಗುಂಪು ಅಲ್ಲಿಗೆ ಧಾವಿಸಿ ಸಾದಿಕ್ ಖಾನ್ ರ ಭಾಷಣಕ್ಕೆ ಅಡ್ಡಿಪಡಿಸಿತ್ತು. ಅಲ್ಲದೆ ಸಾದಿಕ್ ಖಾನ್ ರನ್ನು ಬಂಧಿಸಲು ಪೊಲೀಸರನ್ನು ಕರೆತಂದಿತ್ತು. ಆದರೆ ಮೇಯರ್ ರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪೊಲೀಸರು ಈ ಗುಂಪಿನ ಸದಸ್ಯರನ್ನು ಹೊರದಬ್ಬಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News