ಟಿ20 ಕ್ರಿಕೆಟ್ ನಲ್ಲಿ 2ನೇ ವೇಗದ ಶತಕ ಸಿಡಿಸಿದ ರಿಷಭ್‌ಪಂತ್

Update: 2018-01-14 09:16 GMT

ಹೊಸದಿಲ್ಲಿ, ಜ.14: ದಿಲ್ಲಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಟ್ವೆಂಟಿ -20 ಕ್ರಿಕೆಟ್‌ನಲ್ಲಿ ದಾಖಲಿಸಿದ ವೇಗದ ಶತಕದ ನೆರವಿನಲ್ಲಿ ದಿಲ್ಲಿ ತಂಡ ಇಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಉತ್ತರ ವಲಯ ಟ್ವೆಂಟಿ -20 ಲೀಗ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.

 ಗೆಲುವಿಗೆ 144 ರನ್‌ಗಳ ಸವಾಲನ್ನು ಪಡೆದ ದಿಲ್ಲಿ ತಂಡ 11.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 148 ರನ್ ಗಳಿಸಿ ಗೆಲುವಿನ ದಡ ಸೇರಿತು.
    
  ರಣಜಿ ಟ್ರೋಫಿ ಫೈನಲ್‌ನಲ್ಲಿ ದಿಲ್ಲಿ ತಂಡ ಸೋಲು ಅನುಭವಿಸಿದ ಬಳಿಕ ನಾಯಕತ್ವವನ್ನು ಕಳೆದುಕೊಂಡಿದ್ದ ಪಂತ್ ಅವರು ಇಂದು ಔಟಾಗದೆ 38 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ 116 ರನ್ ಮತ್ತು ಗೌತಮ್ ಗಂಭೀರ್ ಅವರು ಔಟಾಗದೆ 30 ರನ್ (33ಎಸೆತ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ರಿಷಭ್ ಪಂತ್ ಅವರು 32 ಎಸೆತಗಳಲ್ಲಿ 8 ಬೌಂಡರಿ ಮತ್ತು 10 ಸಿಕ್ಸರ್ ನೆರವಿನಲ್ಲಿ ವೇಗದ ಶತಕ ದಾಖಲಿಸಿದರು. ಇದು ಟ್ವೆಂಟಿ -20 ಕ್ರಿಕೆಟ್ ನಲ್ಲಿ ವೇಗದ ಎರಡನೇ ಶತಕವಾಗಿದೆ. 2013ರಲ್ಲಿ ಐಪಿಎಲ್‌ನಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು 30 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಅವರ ಬಳಿಕ ಇದೀಗ ಟ್ವೆಂಟಿ -20 ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ವಿಶ್ವದ ಎರಡನೇ ದಾಂಡಿಗ ಎನಿಸಿಕೊಂಡಿದ್ದಾರೆ ರಿಷಭ್ ಪಂತ್.
  ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಅವರು ಇದಕ್ಕೂ ಮೊದಲು 4 ಕ್ಯಾಚ್ ಗಳನ್ನು ಪಡೆದು ಹಿಮಾಚಲ ಪ್ರದೇಶದ ಬ್ಯಾಟಿಂಗ್‌ನ್ನು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 144 ರನ್‌ಗಳಿಗೆ ನಿಯಂತ್ರಿಸಲು ನೆರವಾಗಿದ್ದರು. ಹಿಮಾಚಲ ಪ್ರದೇಶದ ನಿಕಿಲ್ ಗಂಗ್ತಾ(40) ಗರಿಷ್ಠ ಸ್ಕೋರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News