ರಕ್ತ ನೀಡುವ ಮೂಲಕ ಮಾನವೀಯ ಸಂಬಂಧ ವೃದ್ಧಿ: ಪ್ರವೀಣ್ ಚಂದ್ರ ಆಳ್ವ

Update: 2018-01-14 09:53 GMT

ಮಂಗಳೂರು, ಜ. 14: ಧರ್ಮದ ಹೆಸರಿನಲ್ಲಿ ಪರಸ್ಪರ ದ್ವೇಷ ಹುಟ್ಟಿಸುತ್ತಿರುವವರ ಮಧ್ಯೆ, ರಕ್ತವನ್ನು ನೀಡುವ ಮೂಲಕ ನಮ್ಮ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಿದೆ ಎಂದು ಮನಪಾ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಅಭಿಪ್ರಾಯ ಪಟ್ಟರು. 

ನಗರದ ಪಕ್ಕಲಡ್ಕದಲ್ಲಿರುವ ಸ್ನೇಹ ಪಬ್ಲಿಕ್ ಸ್ಕೂಲಿನ ದಶಮಾನೋತ್ಸವದ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನ ಸಹಯೋಗದಲ್ಲಿ ಇಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹಕ್ಕಾಗಿ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆ ಎಂಬುವುದು ಪವಿತ್ರವಾದ ಸ್ಥಳ. ಶಾಲೆಯ ದಶಮಾನೋತ್ಸದ ಪ್ರಯುಕ್ತ ಸ್ನೇಹಕ್ಕಾಗಿ ರಕ್ತದಾನ ಹೆಸರಿನಲ್ಲಿ ಆಯೋಜಿಸಿರುವ ಈ ರಕ್ತದಾನ ಶಿಬಿರವು ನಿಜಕ್ಕೂ ಶ್ಲಾಘನೀಯ. ಇಂತಹಾ ಕಾರ್ಯಗಳು ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಲಯನ್ಸ್ ಕ್ಲಬ್, ಬೆಂದೂರ್ ವೆಲ್ ನ ಅಧ್ಯಕ್ಷರಾದ ನಾಗೇಶ್ ಕುಮಾರ್ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ-ಧರ್ಮದ ಭೇದವಿಲ್ಲ. ರಕ್ತ ನೀಡುವಾಗ ಭೇದ ಭಾವ ಮಾಡದೆ, ಎಲ್ಲರಿಗೂ ನೀಡಿ ಜೀವ ಉಳಿಸುವ ಪುಣ್ಯ ಕಾರ್ಯಕ್ಕೆ ಕೈಜೋಡಿಸುವವರಾಗಬೇಕು ಎಂದರು.

ವಿನೂತನ ಶೈಲಿಯಲ್ಲಿ ಉದ್ಘಾಟನೆ

ಸ್ಥಳೀಯರಾದ ಬಶೀರ್, ಜಿ.ಗೋಪಾಲಕೃಷ್ಣ ಹಾಗೂ ಚಾಲ್ರ್ಸ್ ಮೊಂತೇರೋ ಒಮ್ಮೆಗೆ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ವಿನೂತನ ಶೈಲಿಯಲ್ಲಿ ಉದ್ಘಾಟಿಸಿದರು. ರಕ್ತಕ್ಕೆ ಯಾವುದೇ ಜಾತಿ-ಧರ್ಮವಿಲ್ಲ. ಜೀವ ಉರುಳಿಸುವವರ ಮಧ್ಯೆ ಜೀವ ಉಳಿಸುವ ಧಾರಾಳ ಉತ್ತಮ ವ್ಯಕ್ತಿಗಳು ನಮ್ಮ ಸಮಾಜ ದಲ್ಲಿದ್ದಾರೆ ಎಂಬ ಸ್ನೇಹ ಸಂದೇಶವನ್ನು ಸಾರಿದರು.

ರಕ್ತದಾನಿಗಳಿಗೆ ಸನ್ಮಾನ

ಇದೇ ವೇಳೆ ಹೆಚ್ಚು ಬಾರಿ ರಕ್ತದಾನ ಮಾಡಿದ ಸ್ಥಳೀಯರಾದ ಬಿ. ಹರಿಪ್ರಸಾದ್ (67 ಬಾರಿ), ಸುರೇಶ್ ಬಜಾಲ್ (36 ಬಾರಿ) ಹಾಗೂ ಅಬ್ದುರ್ರಝಾಕ್ (31 ಬಾರಿ) ರವರನ್ನು ಇದೇ ವೇಳೆ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ನೇಹ ಪಬ್ಲಿಕ್ ಸ್ಕೂಲಿನ ಚೇರ್ ಮೆನ್ ಯೂಸುಫ್ ಪಕ್ಕಲಡ್ಕ, ಶಿಕ್ಷಕ-ರಕ್ಷಕರ ಸಂಘದ ಅಧ್ಯಕ್ಷರಾದ ಪಿ.ಬಿ. ಮುಹಮ್ಮದ್, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಸಮೀರ್ ಪಕ್ಕಲಡ್ಕ, ಮುಖ್ಯ ಶಿಕ್ಷಕಿ ಸಮ್‍ಅ ಜುವೇರಿಯಾ, ಶಿಬಿರದ ಸಂಚಾಲಕ ಯಾಕೂಬ್ ಪಕ್ಕಲಡ್ಕ, ಸುಲೈಮಾನ್ ಪಕ್ಕಲಡ್ಕ, ಶೈಬಾನ್ ಪಕ್ಕಲಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಹ್ಸಿನ್ ಕಂದಕ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಮುಸವ್ವಿರ್ ಪಕ್ಕಲಡ್ಕ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News