ಉಡುಪಿ ಹೊಟೇಲಿನಲ್ಲಿ ‘ಬೌ ಬೌ ಬಿರಿಯಾನಿ’ ಎಂಬ ಫೇಕ್‌ನ್ಯೂಸ್ !
ಉಡುಪಿ, ಜ.14: ನಾಯಿ ಮಾಂಸದ ಬಿರಿಯಾನಿಯನ್ನು ತಯಾರಿಸುತ್ತಿದ್ದ ಉಡುಪಿ ನಗರದ ಮಾಂಸಹಾರಿ ಹೊಟೇಲೊಂದಕ್ಕೆ ಪೊಲೀಸರು ದಾಳಿ ನಡೆಸಿ ದ್ದಾರೆಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಗರದ ಜನತೆಯ ಆತಂಕಕ್ಕೆ ಕಾರಣವಾದ ಈ ಸುಳ್ಳು ಸುದ್ದಿಯ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಕಿಡಿಗೇಡಿಗಳು ‘ದಾವತ್’ ರೆಸ್ಟೋರೆಂಟ್‌ನ ಫೋಟೋ ಜೊತೆ ಸತ್ತ ನಾಯಿ ಗಳ ಹಾಗೂ ಪೊಲೀಸರು ಹೊಟೇಲೊಂದರಲ್ಲಿ ಪರಿಶೀಲನೆ ಮಾಡುವ ಮತ್ತು ಮಾಂಸದ ರಾಶಿಯ ಫೋಟೋಗಳನ್ನು ಸೇರಿಸಿ, ‘ಉಡುಪಿ ನಗರದ ಹೊಟೇಲ್ ನಲ್ಲಿ ನಾಯಿ ಬಿರಿಯಾನಿ ಮಾರಾಟ, ಪೊಲೀಸರಿಂದ ದಾಳಿ’ ಎಂಬ ಸುಳ್ಳು ಸುದ್ದಿಯನ್ನು ವಾಟ್ಸಾಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿದ್ದಾರೆ.
ಅಸಲಿಗೆ ಇದು ಉಡುಪಿಯ ದಾವತ್ ಹೊಟೇಲಿನ ಫೋಟೋ ಅಲ್ಲ. ಬದಲು ತೆಲಂಗಾಣ ರಾಜ್ಯದ ಖಮ್ಮಾಮ್ ಜಿಲ್ಲೆಯ ಹೊಟೇಲಿನ ಫೋಟೋ ಆಗಿದೆ. ಅಲ್ಲದೆ ಸತ್ತ ನಾಯಿಗಳ ರಾಶಿಯ ಫೋಟೋವನ್ನು ಇಂಟರ್‌ನೆಟ್‌ನಿಂದ ತೆಗೆಯಲಾಗಿದೆ. ಅದೇ ರೀತಿ ಪೊಲೀಸರು ಪರಿಶೀಲನೆ ಮಾಡುವ ಫೋಟೋ ಹೊರ ರಾಜ್ಯದ್ದಾಗಿದೆ. ಒಟ್ಟಾರೆ ಈ ಸುಳ್ಳು ಸುದ್ದಿಯ ಫೋಟೋಗಳು ಒಂದಕ್ಕೊಂದು ಸಂಬಂಧ ಇಲ್ಲದ್ದಾಗಿದೆ.
ಯಾವುದೋ ದುರುದ್ದೇಶ ಇಟ್ಟುಕೊಂಡು ಈ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿಗೆ. ಇದನ್ನು ಸರಿಯಾಗಿ ಪರಾಮರ್ಶಿಸದ ಕೆಲವರು ಬೇರೆ ಬೇರೆ ಗ್ರೂಪ್‌ಗಳಿಗೆ ಶೇರ್ ಮಾಡುತ್ತಿದ್ದಾರೆ. ನಿನ್ನೆಯಿಂದ ಹರಿದಾಡುತ್ತಿರುವ ಸುಳ್ಳು ಸುದ್ದಿಯು ಹೊಟೇಲ್ ಮಾಲಕರು ಹಾಗೂ ನಗರ ಜನತೆಯಲ್ಲಿ ಗಾಬರಿ ಹಾಗೂ ಆತಂಕ ಉಂಟು ಮಾಡಿದೆ. ಈ ಬಗ್ಗೆ ಪತ್ರಕರ್ತರಲ್ಲಿ ಸ್ಪಷ್ಟತೆ ಕೇಳಿ ಸಾಕಷ್ಟು ಮಂದಿ ದೂರವಾಣಿ ಕರೆ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ‘ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಉಡುಪಿಯಲ್ಲಿ ನಾಯಿ ಮಾಂಸದ ಬಿರಿಯಾನಿ ಮಾರಾಟ ಮಾಡುವ ಯಾವುದೇ ಹೊಟೇಲ್ ಗಳಿಗೆ ಪೊಲೀಸರು ದಾಳಿ ಮಾಡಿಲ್ಲ. ಜನತೆ ಈ ರೀತಿ ಸುಳ್ಳು ಸುದ್ದಿಯನ್ನು ನಂಬಬಾರದು ಮತ್ತು ಶೇರ್ ಮಾಡಬಾರದು’ ಎಂದು ತಿಳಿಸಿದ್ದಾರೆ.
‘ತೆಲಂಗಾಣ ರಾಜ್ಯದ ಖಮ್ಮಾಮ್ ಜಿಲ್ಲೆಯ ದಾವತ್ ಹೊಟೇಲಿನ ಫೋಟೋ ಜೊತೆ ಸತ್ತ ನಾಯಿಗಳು ಹಾಗೂ ಪೊಲೀಸರ ಫೋಟೋವನ್ನು ಹಾಕಿ ಉಡುಪಿಯ ಹೊಟೇಲೆಂದು ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುತ್ತಿದ್ದು, ಇದು ಅಪ್ಪಟ್ಟ ಸುಳ್ಳು ಸುದ್ದಿ. ಇದನ್ನು ಯಾರು ಕೂಡ ನಂಬಬಾರದು. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಕ್ರೈಮ್‌ಗೆ ದೂರು ನೀಡಲಾಗಿದೆ’ ಎಂದು ಉಡುಪಿ ದಾವತ್ ಹೊಟೇಲಿನ ಪಾಲುದಾರ ಸಲಾವುದ್ದೀನ್ ಪತ್ರಿಕೆಗೆ ತಿಳಿಸಿದ್ದಾರೆ.
ಹೊರ ರಾಜ್ಯದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಕಿಡಿಗೇಡಿಗಳು ಉಡುಪಿಯಲ್ಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಚಿತ್ರಗಳು.