ಮುಡಿಪು : ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ
ಕೊಣಾಜೆ, ಜ. 14: ಧರ್ಮ ಪಂಡಿತರನ್ನು ಸ್ಮರಿಸುವ ಕಾರ್ಯ ಉತ್ತಮವಾದುದು. ಧರ್ಮಪಂಡಿತರ ಪಾಂಡಿತ್ಯದ ಬಗ್ಗೆ ನಮಗೆ ಗೊತ್ತಾಗುವುದು ಅವರು ನಮ್ಮನ್ನಗಲಿ ಹೋದ ನಂತರವೇ ಆಗಿದೆ. ತಾಜುಲ್ ಉಲಮ ಅವರ ಸಾಧನೆ, ಅವರಿಗಿದ್ದ ಗೌರವ ಅವರು ಇಹಲೋಕ ತ್ಯಜಿಸಿದ ಬಳಿಕ ಜನರಿಗೆ ಮನದಟ್ಟಾಗಿದೆ ಎಂದು ಸಯ್ಯಿದ್ ಜಮಲುಲ್ಲೈಲಿ ತಂಙಳ್ ಮದನಿ ಕಾಜೂರು ಹೇಳಿದರು.
ಅವರು ಮದನೀಸ್ ಅಸೋಸಿಯೇಶನ್ ಬಂಟ್ವಾಳ ತಾಲೂಕು ಸಮಿತಿ ಮತ್ತು ತಾಜುಲ್ ಉಲಮಾ ಫೌಂಡೇಶನ್ ಮುಡಿಪು ಇದರ ಜಂಟಿ ಆಶ್ರಯದಲ್ಲಿ ಮುಡಿಪುವಿನಲ್ಲಿ ನಡೆದ ತಾಜುಲ್ ಉಲಮಾ ಅನುಸ್ಮರಣೆ, ಖತ್ಮುಲ್ ಖುರ್ಆನ್ ಮತ್ತು ಜಲಾಲಿಯ್ಯ ರಾತೀಬ್ ಮಜ್ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಳಾಲದಲ್ಲಿ ಧಾರ್ಮಿಕ ಶಿಕ್ಷಣದ ಬೆಳವಣಿಗೆಗೆ ತಾಜುಲ್ ಉಲಮಾ ಕಾರಣಕರ್ತರಾಗಿದ್ದಾರೆ. ಯಾವುದೇ ಸಮಸ್ಯೆ ಇದ್ದರೆ ಅವರಿಂದ ಪರಿಹಾರ ಸಿಗುತ್ತದೆ ಎಂಬ ಧೈರ್ಯ ಎಲ್ಲರಲ್ಲಿ ಇತ್ತು. ಇದೀಗ ಅವರನ್ನು ಸ್ಮರಿಸಲು ಮಾತ್ರ ನಮಗೆ ಅವಕಾಶ ಇದೆ. ಕಣ್ಣು ಕಳಕೊಂಡರೆ ಕಣ್ಣಿನ ಮಹತ್ವ ಹೇಗೆ ಗೊತ್ತಾಗುತ್ತದೆಯೋ ಅದೇ ರೀತಿ ಪಂಡಿತರನ್ನು ಕಳಕೊಂಡರೆ ನಮಗೆ ಧಾರ್ಮಿಕ ಪಂಡಿತರ ಮಹತ್ವ ಗೊತ್ತಾಗುತ್ತದೆ. ಇದಕ್ಕೆ ತಾಜುಲ್ ಉಲಮಾ ಉದಾಹರಣೆ ಅಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕರ್ ಮದನಿ ವಹಿಸಿದ್ದರು. ಅಬ್ಬಾಸ್ ಉಸ್ತಾದ್,ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಮಹಮ್ಮದ್ ಮದನಿ ಸಾಮಣಿಗೆ, ಸಯ್ಯಿದ್ ಜಅಫರ್ ಸಾಧಿಕ್‌ತಂಙಳ್ ಕುಂಬೋಳ್ ಮೊದಲಾದವರು ಉಪಸ್ಥಿತರಿದ್ದರು.ಅಕ್ಬರ್ ಅಲಿ ಮದನಿ ಆಲಂಪಾಡಿ ಸ್ವಾಗತಿಸಿದರು.