×
Ad

‘ಬಸವಣ್ಣನವರ ಕೆಲವು ಕ್ರಾಂತಿಕಾರಿ ವಚನಗಳು’ ಪುಸ್ತಕ ಬಿಡುಗಡೆ

Update: 2018-01-14 20:21 IST

ಉಡುಪಿ, ನ.14: ಉಡುಪಿ ನೂತನ ಪಬ್ಲಿಕೇಶನ್ಸ್ ವತಿಯಿಂದ ಲೇಖಕ ಗೋಪಾಲ ಬಿ.ಶೆಟ್ಟಿ ಅವರ ‘ಬಸವಣ್ಣನವರ ಕೆಲವು ಕ್ರಾಂತಿಕಾರಿ ವಚನಗಳು’ ಕೃತಿಯ ಬಿಡುಗಡೆ ಸಮಾರಂಭವು  ಉಡುಪಿಯ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಕವಯತ್ರಿ ಹಾಗೂ ಅಂಕಣ ಬರಹಗಾರ್ತಿ ಜ್ಯೋತಿ ಗುರುಪ್ರಸಾದ್ ಮಾತನಾಡಿ, ಬಸವಣ್ಣ ಅವರ ವಿಚಾರಧಾರೆಗಳು ಅಂದು ಮತ್ತು ಇಂದು ರಾಜಕೀಯ ದಾಳವಾಗಿ ಬಳಸಲ್ಪಡುತ್ತಿರುವುದು ಮತ್ತು ವಾಣಿಜ್ಯಕರಣಗೊಂಡಿರುವುದು ಖೇದಕರ. ಅವರ ವಚನಗಳು ಹಿಂಸೆಯ ದಳ್ಳುರಿಯಲ್ಲಿ ಬೇಯುತ್ತಿರುವ ಕರಾವಳಿಗೆ ಶಾಂತಿಯ ಸಂದೇಶವನ್ನು ನೀಡು ವಂತಾಗಲಿ ಎಂದು ಹಾರೈಸಿದರು.

ದಲಿತ ಹೋರಾಟಗಾರ ಜಯನ್ ಮಲ್ಪೆಮಾತನಾಡಿ, ಬಲಪಂಥೀಯ ವಿಚಾರಧಾರೆಗಳು ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ಈ ಕೃತಿ ಸಹಕಾವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಕೃತಿಯನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಬಿಡುಗಡೆಗೊಳಿಸಿದರು. ಉಡುಪಿಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿರಂಜನ ಯು.ಸಿ. ಕೃತಿ ಪರಿಚಯ ಮಾಡಿದರು. ಲೇಖಕ ಗೋಪಾಲ ಬಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಾ ಜಿ.ಶೆಟ್ಟಿ ವಂದಿಸಿದರು. ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮೊದಲು ಉಡುಪಿಯ ಬುಡ್ಗ ಜಂಗಮರ ತಂಡದಿಂದ ವಚನ ಗಾಯನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News