ತಂದೆಯ ಸಾವಿನಲ್ಲಿ ಸಂಶಯವಿಲ್ಲ, ನಮಗೆ ಕಿರುಕುಳ ನೀಡಬೇಡಿ: ನ್ಯಾ.ಲೋಯಾ ಪುತ್ರ ಅನುಜ್
ಹೊಸದಿಲ್ಲಿ, ಜ. 14: ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ಸಾವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಅವರ ಕುಟುಂಬ ಹೇಳಿದೆ.
ರವಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಯಾ ಅವರ ಪುತ್ರ ಅನುಜ್ ಲೋಯಾ, ನನ್ನ ತಂದೆ ಅವರ ಸಾವಿನ ಬಗ್ಗೆ ನಮಗೆ ಈಗ ಯಾವುದೇ ಸಂಶಯ ಇಲ್ಲ. ಆದರೆ, ನಮಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದಿದ್ದಾರೆ.
‘‘ನನಗೆ ಯಾವುದೇ ಸಂಶಯ ಇಲ್ಲ. ಈ ಹಿಂದೆ ಭಾವನಾತ್ಮಕ ಕ್ಷೋಭೆಗೆ ಒಳಗಾಗಿದ್ದುದರಿಂದ ಸಂಶಯ ಇತ್ತು. ಆದರೆ, ಈಗ ನಿವಾರಣೆಯಾಗಿದೆ. ನನಗೆ ಆಗ 17 ವರ್ಷ. ಆ ಸಂದರ್ಭದಲ್ಲಿ ಯಾವುದೂ ಅರ್ಥ ಆಗುತ್ತಿರಲಿಲ್ಲ’’ ಎಂದು ಅನುಜ್ ಲೋಯಾ ಹೇಳಿದ್ದಾರೆ.
ಇದರಲ್ಲಿ ಯಾವುದೇ ಸಂಚು ಇಲ್ಲ. ನಾವು ಯಾವುದೇ ರಾಜಕೀಯ ವಿಷಯದ ಬಲಿಪಶುಗಳಾಗಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂದರ್ಭ ಲೋಯಾ ಅವರ ವಕೀಲ ಅಮೀತ್ ನಾಯ್ಕ್ ಜೊತೆಗಿದ್ದರು.
ಕಳೆದ ವರ್ಷ ಕಾರವನ್ ಸುದ್ದಿ ಮ್ಯಾಗಝಿನ್‌ಗೆ ಲೋಯಾ ಅವರ ಸಹೋದರಿ ಅನುರಾಧ ಬಿಯಾನಿ ಸಂದರ್ಶನ ನೀಡಿ ಲೋಯಾ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಯಾ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ದೇಶದ ವಿವಿಧ ಭಾಗಗಳಿಂದ ಆಗ್ರಹ ಕೇಳಿ ಬಂದಿತ್ತು.