ಸುಪ್ರೀಂ ಬಿಕ್ಕಟ್ಟನ್ನು ಸಿಜೆಐ ಬಗೆಹರಿಸದಿದ್ದರೆ ಪ್ರತಿಭಟನೆ: ದಿಲ್ಲಿ ವಕೀಲರ ಎಚ್ಚರಿಕೆ
ಹೊಸದಿಲ್ಲಿ,ಜ.14: ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಸುದ್ದಿಗೋಷ್ಠಿಯನ್ನು ನಡೆಸಿದ್ದ ದಿನವನ್ನು ನ್ಯಾಯಾಂಗದ ‘ಕರಾಳ ದಿನ’ ಎಂದು ರವಿವಾರ ಇಲ್ಲಿ ಬಣ್ಣಿಸಿದ ದಿಲ್ಲಿ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿಯು, ಮುಖ್ಯ ನ್ಯಾಯಮೂರ್ತಿ(ಸಿಜೆಐ)ಗಳು ಹತ್ತು ದಿನಗಳಲ್ಲಿ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಇಂದಿಲ್ಲಿ ಸಭೆಯೊಂದನ್ನು ನಡೆಸಿ ನಿರ್ಣಯವೊಂದನ್ನು ಅಂಗೀಕರಿಸಿರುವ ಸಮಿತಿಯು, ನ್ಯಾಯಾಂಗದಲ್ಲಿಯ ಇಂತಹ ಬಿಕ್ಕಟ್ಟುಗಳನ್ನು ಬಗೆಹರಿಸಲು ಆಂತರಿಕ ವ್ಯವಸ್ಥೆಯೊಂದನ್ನು ರೂಪಿಸಬೇಕು ಮತ್ತು ಇಂತಹ ಘಟನೆಗಳನನ್ನು ತಡೆಯಲು ನ್ಯಾಯಾಂಗ ಉತ್ತರದಾಯಿತ್ವ ಮಸೂದೆಯನ್ನು ತರಬೇಕು ಎಂದು ಹೇಳಿತು. ಈ ವಿಷಯದಲ್ಲಿ ತಾನು ದೇಶಾದ್ಯಂತದ ವಕೀಲರ ಸಂಘಗಳೊಂದಿಗೆ ಚರ್ಚಿಸುವುದಾಗಿ ಅದು ತಿಳಿಸಿತು.
ಮುಖ್ಯ ನ್ಯಾಯಮೂರ್ತಿಗಳು ತನ್ನ ಅಧೀನದ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕಿತ್ತು ಮತ್ತು ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರ ದೂರುಗಳನ್ನು ತಕ್ಷಣ ಪರಿಹರಿಸಬೇಕಿತ್ತು ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.