ಒಂದೇ ಕಾಂಕ್ರೀಟ್ ರಸ್ತೆಗೆ ಎರಡು ಬಾರಿ ಉದ್ಘಾಟನೆ ಭಾಗ್ಯ!
ಬಂಟ್ವಾಳ, ಜ. 14: ತಾಲೂಕಿನ ಪುರಸಭಾ ವಾಪ್ತಿಯ 17ನೇ ವಾರ್ಡಿನಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ ಸಿಕ್ಕಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಸರಕಾರದ ಅನುದಾನದಿಂದ ತಾಲೂಕಿನ ಪೊನ್ನೋಡಿಯಿಂದ ಗಾಂಧೋಡಿಯವರೆಗಿನ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ 45 ಮೀ. ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿತ್ತು. ಈ ವಾರ್ಡಿನ ಪುರಸಭಾ ಸದಸ್ಯೆ ಮುಮ್ತಾಝ್ ಬಿ.ಸಿ.ಲತೀಫ್ ಅವರು ಇಂದು ಬೆಳಿಗ್ಗೆ 8.30ಕ್ಕೆ ಉದ್ಘಾಟಿಸಿದರೆ, ಜಿಲ್ಲಾ ಉಸ್ತವಾರಿ ಸಚಿವ ರಮಾನಾಥ ರೈ ಅವರು ಬೆಳಗ್ಗೆ 11ಕ್ಕೆ ಮತ್ತೊಮ್ಮೆ ಉದ್ಘಾಟಿಸಿದ್ದಾರೆ. ಈ ಎರಡು ಪಕ್ಷಗಳ ಒಳಜಗಳದಿಂದ ಒಂದೇ ರಸ್ತೆ ಕಾಮಗಾರಿಗೆ ಎರಡು ಸಲ ಉದ್ಘಾಟನೆ ಭಾಗ್ಯ ಲಭಿಸಿದಂತಾಗಿದ್ದು, ಸಾರ್ವಜನಿಕರಲ್ಲಿ ಗೊಂದಲದ ವಾತಾರಣ ಮೂಡಿದಂತಾಗಿದೆ.
ಮುಖ್ಯಮಂತ್ರಿ ಅವರ ಅನುದಾನದಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಶಿಫಾರಸ್ಸಿನಂತೆ ಈ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಇದು ತನ್ನ ಹಳೆಯ ವಾರ್ಡ್ ಕೂಡಾ ಹೌದು. ಇಲ್ಲಿನ ಕೆಲವು ರಸ್ತೆ ಕಾಮಗಾರಿಯ ಕೆಲಸ ಬಾಕಿಯಿತ್ತು. ಈ ಸ್ಥಳಕ್ಕೆ ಹಣ ಮೀಸಲಿಡುವಂತೆ ಪುರಸಭೆಯಲ್ಲಿ ಮನವಿ ಮಾಡಲಾಗಿತ್ತು. ಅದೇ ಕಾಮಗಾರಿಯೂ ಪೂರ್ತಿಗೊಂಡಿದೆ. ಇದರಿಂದ ಸಚಿವ ರೈ ಕೈಯಲ್ಲಿ ಉದ್ಘಾಟನೆ ಮಾಡಿದ್ದೇವೆ.
- ಸದಾಶಿವ ಬಂಗೇರ, ಬುಡಾ ಅಧ್ಯಕ್ಷ
ಬಹುಬೇಡಿಕೆಯ ಪೊನ್ನೋಡಿ-ಗಾಂಧೋಡಿಯವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಮನವಿಯ ಮೂಲಕ ಒತ್ತಾಯಿಸಿದ್ದೆ. ಮುಖ್ಯಮಂತ್ರಿ ಅವರ ನಿಧಿಯಿಂದ ತನ್ನ 17ನೇ ವಾರ್ಡ್‌ಗೆ ಸುಮಾರು 10 ಲಕ್ಷ ರೂ. ಅನುದಾನ ಬಂದಿದೆ. ಇದರಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಪೊನ್ನೋಡಿ-ಗಾಂಧೋಡಿ ಕಾಂಕ್ರಿಟ್ ರಸ್ತೆ, 1.50 ಲಕ್ಷ ರೂ. ವೆಚ್ಚದಲ್ಲಿ ತಲಪಾಡಿ ಮಸೀದಿ ಬಳಿ ನಿರ್ಮಿಸಿರುವ ಹೈಮಾಸ್ ದೀಪ ಅಳವಡಿಕೆ ಹಾಗೂ ಇನ್ನುಳಿದ ಅನುದಾನದಿಂದ ಬೈಕಂಡಿ ಬಳಿಯಿರುವ ಕಾಂಕ್ರೀಟ್ ರಸ್ತೆಗೆ ಮೀಸಲಿಡಲಾಗಿದೆ.
ಮುಮ್ತಾಝ್ ಬಿ.ಸಿ.ಲತೀಫ್, ಪುರಸಭಾ ಸದಸ್ಯೆ
ಬಂಟ್ವಾಳ ತಾಲೂಕಿನ ಪೊನ್ನೋಡಿಯಿಂದ ಗಾಂಧೋಡಿಯವರೆಗಿನ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಪುರಸಭಾ ಸದಸ್ಯೆ ಮುಮ್ತಾಝ್ ಬಿ.ಸಿ.ಲತೀಫ್ ಅವರು ರವಿವಾರ ಬೆಳಿಗ್ಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರೀಫ್, ಜುಬೈಲ್ ಸಿ.ಜೆ., ಅಕ್ಬರ್ ಅಲಿ ಪೊನ್ನೋಡಿ, ಬಿ.ಸಿ.ಲತೀಫ್, ಸವಾರ್, ಲತೀಫ್ ಕೆ.ಎಚ್., ಶಾಹುಲ್ ಹಮೀದ್, ತಾಜುದ್ದೀನ್ ಓವೈಸಿ, ಇಸಾಕ್, ನವಾಝ್, ಕಮರುದ್ದೀನ್, ಎಆರ್‌ಎಫ್‌ನ ಅನ್ವರ್ ಕೆ.ಎಚ್ ಮತ್ತಿತರರು ಇದ್ದರು.