×
Ad

ಪಡುಬಿದ್ರೆ : ಜೋಡುಕರೆಯ 26ನೆ ವರ್ಷದ ಕಂಬಳೋತ್ಸವ

Update: 2018-01-14 21:59 IST

ಪಡುಬಿದ್ರೆ, ಜ. 14: ಇಲ್ಲಿಗೆ ಸಮೀಪದ ಅಡ್ವೆ ಜೋಡುಕರೆಯ 26ನೆ ವರ್ಷದ ಕಂಬಳೋತ್ಸವವು ಅಡ್ವೆ ಗಣಪತಿ ದೇವಸ್ಥಾನದ ಬಳಿ ಹೊನಲು ಬೆಳಕಿನಡಿ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಈ ಭಾಗದಲ್ಲಿ ಜನಪದ ವೀರ ಕ್ರೀಡೆಯಾಗಿರುವ ಕಂಬಳವು ಆತಂಕಗಳಿಂದ ದೂರವಾಗಿದೆ. ಈ ನಿಟ್ಟಿನಲ್ಲಿ ಶಾಶ್ವತವಾದ ವ್ಯವಸ್ಥೆಗಾಗಿ ಸ್ಥಳ ಕಾಯ್ದಿರಿಸುವ ಮೂಲಕ ಕಂಬಳ ಕ್ರೀಡೆಯು ಉಜ್ವಲವಾಗಿ ಬೆಳೆದು ಸ್ವಾಭಿಮಾನಿ ರೈತ ಬಾಂಧವರಿಗೆ ಸಾಕಷ್ಟು ಅವಕಾಶಗಳಾಗಬೇಕು ಎಂದರು.

ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಕಷ್ಟದ ದಿನಗಳಲ್ಲೂ ತುಳುನಾಡಿನ ಜನರ ಸಹಕಾರದಿಂದ ಶಿಸ್ತು ಬದ್ಧವಾಗಿ ಕಂಬಳವು ನಡೆಯುತ್ತಿತ್ತು. ಅನೇಕ ತೊಂದರೆಗಳನ್ನೆದುರಿಸಿದ ತುಳುವರ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ. ಕ್ರೀಡಾ ಇಲಾಖೆಯ ಮೂಲಕ ಕಂಬಳಕ್ಕೂ ರಾಜ್ಯ ಪ್ರಶಸ್ತಿ ದೊರಕಿಸುವ ಚಿಂತನೆ ಇದೆ ಎಂದರು.

ಈ ಸಂದರ್ಭದಲ್ಲಿ ಕಂಬಳ ಕ್ರೀಡೆಗೆ ನಿರಂತರವಾಗಿ ಓಟದ ಕೋಣಗಳನ್ನು ಕಟ್ಟುವ ಮೂಲಕ ಭಾಗವಹಿಸುತ್ತಿದ್ದ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಕ್ರೀಡೆಯ ಪ್ರಧಾನ ತೀರ್ಪುಗಾರ, ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಸಂಚಾಲಕ ಪ್ರೊ.ಕೆ. ಗುಣಪಾಲ ಕಡಂಬ, ಕರ್ನಾಟಕ ರಾಜ್ಯ ಕ್ರೀಡಾ ರತ್ನ ಪುರಸ್ಕೃತ ಕೊಳಚೂರು, ಕೊಂಡೆಟ್ಟು ಸುಕುಮಾರ ಶೆಟ್ಟಿ ಸಹಿತ ಹಲವು ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ, ಮೀನುಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾ ಉಸ್ಯವಾರಿ ಮತ್ತು ಅರಣ್ಯ ಪರಿಸರ ಸಚಿವ ಬಿ.ರಮಾನಾಥ ರೈ, ಕರ್ನಾಟಕ ರಾಜ್ಯೋತ್ಸವ ಪರಸ್ಕೃತ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರಕೂರು ಶಾಂತಾರಮ ಶೆಟ್ಟಿ, ಕಾಪು ಕ್ಷೇತ್ರ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕಾರ್ಕಳ ವಿಧಾನಸಭಾ ಕ್ಷೇತ್ರ, ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ, ಪಲಿಮಾರು ಗ್ರಾಮ ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾದೋ, ಜಿಲ್ಲಾ ಪಂಚಾಯ್ತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ದಿನೇಶ್ ಕೋಟ್ಯಾನ್, ಅದಾನಿ-ಯುಪಿಸಿಎಲ್ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್, ಐಕಳಭಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರುಗಳಾದ ಅಡ್ವೆ, ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ, ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ, ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರ.ಕಾರ್ಯದರ್ಶಿ ನವೀನ್‌ಚಂದ್ರ ಸುವರ್ಣ ಸ್ವಾಗತಿಸಿ, ಗೌರವ ಸಲಹೆಗಾರ ಪ್ರೊ.ಕೆ ಗುಣಪಾಲ ಕಡಂಬ ನಿರ್ವಹಿಸಿ, ಅರಂತಡೆ ಲಕ್ಷ್ಮಣ್ ಎಲ್. ಶೆಟ್ಟಿ ವಂದಿಸಿದರು.

ಫಲಿತಾಂಶ: ಕನೆ ಹಲಗೆ: 6.5 ಕೋಲು ನಿಶಾನಿಗೆ ನೀರು ಚಿಮ್ಮಿಸಿದ ತಿರುವೈಲುಗುತ್ತು ನವೀನಚಂದ್ರ ಆಳ್ವ (ಓಡಿಸಿದವರು-ಬೈಂದೂರು ಭಾಸ್ಕರ ದೇವಾಡಿಗ) ಹಾಗೂ ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ಅವರ ಕೋಣಗಳು( ಓಡಿಸಿದವರು-ನಾರಾವಿ ಯುವರಾಜ ಜೈನ್) ಸಮಾನ ಬಹುಮಾನ ಪಡೆದವು.

ಹಗ್ಗ ಹಿರಿಯ ವಿಭಾಗ: ಮಾಳ ಆನಂದನಿಲಯ ಶೇಖರ ಎ ಶೆಟ್ಟಿ (ಎ) (ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ) ಪ್ರಥಮ , ಪದವು ಕಾನಡ್ಕ ಪ್ರಾನ್ಸಿಸ್ ಫ್ಲೇವಿ ಡಿಸೋಜಾ ಕೋಣಗಳು (ಪಣಪೀಲು ಪ್ರವೀಣ್ ಕೋಟ್ಯಾನ್) ದ್ವಿತೀಯ.

ಹಗ್ಗ ಕಿರಿಯ: ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ (ಎ)(ಮಾರ್ನಾಡ್ ರಾಜೇಶ್) ಪ್ರಥಮ, ಕರ್ನಿರೆ ಆಶ್ರತ್ ಸೈಯದ್ (ಕೊಳಕೆ ಇರ್ವತ್ತೂರು ಆನಂದ) ದ್ವಿತೀಯ.

ನೇಗಿಲು ಕಿರಿಯ: ಬೋಳದಗುತ್ತು ಸತೀಶ್ ಶೆಟ್ಟಿ (ಬಿ) ಕೋಣಗಳು( ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ) ಪ್ರಥಮ, ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ (ಎ)( ಅಳದಂಗಡಿ ರವಿಕುಮಾರ್) ದ್ವಿತೀಯ.

ನೀಗಿಲು ಹಿರಿಯ: ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ (ಮರೋಡಿ ಶ್ರೀಧರ್) ಪ್ರಥಮ, ಕಾಪು ಕಲ್ಯಾ ಜವನೆರ್ (ಬಾರಾಡಿ ಪ್ರಶಾಂತ್ ಕುಮಾರ್) ದ್ವಿತೀಯ.

ಅಡ್ಡ ಹಲಗೆ: ಬೋಳಾರ ತೃಷಾಲ್ ಕೆ ಪೂಜಾರಿ (ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ) ಪ್ರಥಮ ಹಾಗೂ ಹಂಕರ್‌ಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ (ಬಿ) ಕೋಣಗಳು (ನಾರಾವಿ ಯುವರಾಜ ಜೈನ್) ದ್ವಿತೀಯ ಬಹುಮಾನ ಪಡೆಯಿತು.

ಸ್ಪರ್ಧೆಯಲ್ಲಿ ಒಟ್ಟು ನೂರು ಜೊತೆ ಕೋಣಗಳು ಪಾಲ್ಗೊಂಡಿದ್ದವು. ಬಹುಮಾನ ವಿತರಣಾ ಸಮಾರಂಭದಲ್ಲಿ ವಿಧಾನಪರಿಷತ್‌ನ ಮುಖ್ಯ ಸಚೇತಕ ಐವಾನ್ ಡಿಸೋಜಾ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ಎಲ್ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News