×
Ad

ಗಂಗೊಳ್ಳಿ ಬೈಕ್ ಗಳಿಗೆ ಬೆಂಕಿ ಪ್ರಕರಣ: ಬಂಧಿತ ಆರೋಪಿಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ

Update: 2018-01-14 23:01 IST

ಗಂಗೊಳ್ಳಿ, ಜ.14: ಗಂಗೊಳ್ಳಿಯ ದಾಕುಹಿತ್ಲು ಟಕಿಯಾ ಮೊಹಲ್ಲಾ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿ ಬಂಧಿತನಾಗಿರುವ ಗುರುರಾಜ್ ಖಾರ್ವಿ (28)ಯೇ ಕೆಲದಿನಗಳಿಂದ ಗಂಗೊಳ್ಳಿಯಲ್ಲಿ ನಡೆಯುತ್ತಿರುವ ಬೈಕ್‌ ಗಳಿಗೆ ಬೆಂಕಿ ಹಚ್ಚಿರುವ ಎಲ್ಲ ಪ್ರಕರಣಗಳ ಆರೋಪಿ ಎಂಬುದು ಪೊಲೀಸ್ ತನಿಖೆ ಯಿಂದ ಧೃಡಪಟ್ಟಿದೆ.

ಗಂಗೊಳ್ಳಿ ಪೊಲೀಸರು ಆರೋಪಿ ಗುರುರಾಜ್ ಖಾರ್ವಿಯನ್ನು ಜ.13 ರಂದು ಸಂಜೆ ವೇಳೆ ಕುಂದಾಪುರ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಧೀಶರ ಆದೇಶದಂತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಜ.17ರಂದು ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಇದೀಗ ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಬಂಧಿತ ಗುರುರಾಜ್ ಖಾರ್ವಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಜ.7ರಂದು ಗಂಗೊಳ್ಳಿ ಜಾಮೀಯ ಮಸೀದಿ ಹಿಂಬದಿಯ ಅಬ್ದುಲ್ ಮಜೀದ್ ಮತ್ತು ಜ.9ರಂದು ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆಯ ಬದ್ರುದ್ದೀನ್ ಎಂಬವರ ಬೈಕ್‌ಗಳಿಗೆ ನಾನೇ ಬೆಂಕಿ ಹಚ್ಚಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ ತಿಳಿಸಿದ್ದಾರೆ.

ಗಂಗೊಳ್ಳಿಯಲ್ಲಿ ನಡೆದ ಮೂರೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವುದು ಈತ ಒಬ್ಬನೇ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಇದೀಗ ಆರೋಪಿಯನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು, ಈತನ ಈ ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿದರು.

ಜ.13ರಂದು ದಾಕುಹಿತ್ಲು ಟಕಿಯಾ ಮೊಹಲ್ಲಾದ ನಯೀಮ್ ಎಂಬವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಗುರುರಾಜ್ ಖಾರ್ವಿಯನ್ನು ಗಂಗೊಳ್ಳಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಯೊಳಗೆ ಬಂಧಿಸಿದ್ದರು. ಈತ ಸಮುದ್ರದಲ್ಲಿ ಚಿಪ್ಪು ತೆಗೆಯುವ ಕೆಲಸ ನಿರ್ವಹಿಸುತ್ತಿ ದ್ದಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿ ಕದಡುವವರ ವಿರುದ್ಧ ಕ್ರಮ

ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳಿಂದ ಗಂಗೊಳ್ಳಿ ಪರಿಸರದಲ್ಲಿ ಕೋಮುಗಲಭೆ ಸೃಷ್ಠಿಸುವ ಹುನ್ನಾರ ನಡೆಯುತ್ತಿದ್ದು, ಶಾಂತಿ ಸುವ್ಯವಸ್ಥೆ ಕದಡು ವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಂಗೊಳ್ಳಿ ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ಸಂಬಂಧ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9 ಗಂಟೆಯೊಳಗೆ ಬಂದ್ ಮಾಡಬೇಕು. ವಿನಃಕಾರಣ ಅಲ್ಲಲ್ಲಿ ಗುಂಪು ಕಟ್ಟಿ ನಿಲ್ಲುವುದು ಹಾಗೂ ತಿರುಗಾ ಡುವುದನ್ನು ಮಾಡಬಾರದು. ಪ್ರಚೋದನೆ ನೀಡುವಂತಹ ಉದ್ರೇಕಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ನಿರ್ದಾಕ್ಷ್ಯಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಂಗೊಳ್ಳಿ ಎಸ್ಸೈ ಎಚ್ಚರಿಕೆ ನೀಡಿದ್ದಾರೆ.

ಮೀನುಗಾರಾರು ರಾತ್ರಿ ಹಾಗೂ ನಸುಕಿನ ವೇಳೆಯಲ್ಲಿ ತಿರುಗಾಡುವಾಗ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರಬೇಕು. ಸಾರ್ವಜನಿಕರು ಯಾವುದೇ ರೀತಿಯ ಉಹಾಪೋಹಗಳಿಗೆ ಕಿವಿಗೊಡದೆ ಶಾಂತಿ ಸುವ್ಯವಸ್ಥೆ ಯನ್ನು ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News