ಬೈರೂತ್ ನಲ್ಲಿ ಕಾರ್‌ಬಾಂಬ್ ಸ್ಫೋಟ: ಹಮಾಸ್ ಅಧಿಕಾರಿಗೆ ಗಂಭೀರ ಗಾಯ
ಬೈರೂತ್,ಜ.13: ದಕ್ಷಿಣ ಲೆಬನಾನ್‌ನಲ್ಲಿ ರವಿವಾರ ನಡೆದ ಭೀಕರ ಕಾರ್‌ಬಾಂಬ್ ಸ್ಫೋಟದಲ್ಲಿ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್‌ನ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಲೆಬನಾನ್ ಬಂದರುನಗರವಾದ ಸೈದೊನ್‌ನಲ್ಲಿ, ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಬಿಎಂಡಬ್ಲ್ಯು ಕಾರ್‌ನಲ್ಲಿದ್ದ ಬಾಂಬನ್ನು ರಿಮೋಟ್ ಬಳಸಿ ಸ್ಫೋಟಿಸಿದ್ದರಿಂದ, ಹಮಾಸ್ ಅಧಿಕಾರಿ ಮುಹಮ್ಮದ್ ಹಮ್ದಾನ್ ಗಾಯಗೊಂಡಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ. ಹಮ್ದಾನ್ ಅವರ ನಿವಾಸವಿದ್ದ ಕಟ್ಟಡದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಫೋಟದ ಹೊಣೆಯನ್ನು ಈ ತನಕ ಯಾವುದೇ ಗುಂಪು ವಹಿಸಿಕೊಂಡಿಲ್ಲ.
ಸ್ಫೋಟದಿಂದಾಗಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕದಳದ ನೆರವಿನಿಂದ ಅದನ್ನು ನಂದಿಸಲಾಯಿತು. ಘಟನೆಯ ಬಳಿಕ ಇಡೀ ಪ್ರದೇಶವನ್ನು ಲೆಬನಾನ್‌ನ ಭದ್ರತಾಪಡೆಗಳು ಸುತ್ತುವರಿದಿರುವುದಾಗಿ ಮೂಲಗಳು ತಿಳಿಸಿವೆ.
ಹಮ್ದಾನ್ ಅವರು ತನ್ನ ಕಾರಿನ ಬಾಗಿಲನ್ನು ತೆರೆಯುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಅವರಿಗೆ ಅತ್ಯಂತ ಗಂಭೀರವಾದ ಗಾಯಗಳಾಗಿವೆಯೆಂದು ಅವಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸ್ಫೋಟದ ಘಟನೆಗೆ ಸಂಬಂಧಿಸಿ ಹಮಾಸ್ ಸಂಘಟನೆಯು ಯಾವುದೇ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ. ಲೆಬನಾನ್‌ನಾದ್ಯಂತ ಇರುವ 12 ಶಿಬಿರಗಳಲ್ಲಿ ಸಾವಿರಾರು ಫೆಲೆಸ್ತೀನ್ ನಿರಾಶ್ರಿತರು ಆಶ್ರಯಪಡೆದುಕೊಂಡಿದ್ದಾರೆ.
ಸೈದೊನ್ ಸಮೀಪದ ಅಲ್-ಹಿಲ್‌ವೆಹ್‌ನಲ್ಲಿರುವ ಶಿಬಿರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ 61 ಸಾವಿರ ಮಂದಿ ನಿರಾಶ್ರಿತರು ನೆಲೆಸಿದ್ದಾರೆ. ಇವರಲ್ಲಿ ಸುಮಾರು 6 ಸಾವಿರ ಮಂದಿ ನೆರೆಯ ರಾಷ್ಟ್ರವಾದ ಸಿರಿಯದಿಂದ ಪಲಾಯನಗೈದವರಾಗಿದ್ದಾರೆ.