ಒಂದು ವಾರದವರೆಗೆ ಹೊತ್ತಿಉರಿದ ತೈಲ ಟ್ಯಾಂಕರ್ ಹಡಗು ಜಲಸಮಾಧಿ : 32 ಮಂದಿ ಮೃತ್ಯು
Update: 2018-01-14 23:22 IST
ಬೀಜಿಂಗ್,ಜ.13: ಚೀನಾದ ಸಮುದ್ರಪ್ರದೇಶದಲ್ಲಿ ಸರಕು ಸಾಗಣೆ ಹಡಗಿಗೆ ಢಿಕ್ಕಿ ಹೊಡೆದ ಬಳಿಕ ಸುಮಾರು ಒಂದು ವಾರದವರೆಗೆ ಹೊತ್ತಿ ಉರಿಯುತ್ತಿದ್ದ ಇರಾನ್‌ನ ತೈಲ ಟ್ಯಾಂಕರ್ ಹಡಗು ರವಿವಾರ ಜಲಸಮಾಧಿಯಾಗಿದೆ. ಇದರೊಂದಿಗೆ ಹಡಗಿನಲ್ಲಿದ್ದ 32 ಮಂದಿ ನಾವಿಕರಲ್ಲಿ ಯಾರಾದರೂ ಬದುಕಿರುವ ಯಾವುದೇ ಸಾಧ್ಯತೆಗಳು ಈಗ ಉಳಿದಿಲ್ಲವೆಂದು ಮೂಲಗಳು ತಿಳಿಸಿವೆ.
274 ಮೀಟರ್ ವಿಸ್ತೀರ್ಣದ ಸಾಂಚಿ ಹಡಗು, 1.36 ಲಕ್ಷ ಟನ್ ಕಚ್ಚಾ ತೈಲವನ್ನು ದಕ್ಷಿಣ ಕೊರಿಯಾಗೆ ಸಾಗಿಸುತ್ತಿದ್ದಾಗ, ಚೀನಾದ ಯಾಂಗ್‌ಚಿ ನದಿಯ ಅಳಿವೆ ಬಾಗಿಲಿನಲ್ಲಿ ಜನವರಿ 6ರಂದು ಹಾಂಕಾಂಗ್ ನೋಂದಾಯಿತ ಸಿಎಫ್ ಕ್ರಿಸ್ಟಲ್ ಸರಕುಸಾಗಣೆ ಹಡಗಿಗೆ ಢಿಕ್ಕಿ ಹೊಡೆದಿತ್ತು.
ಇಡೀ ಹಡಗು ಹೊತ್ತಿ ಉರಿಯುತ್ತಿದ್ದುದಲ್ಲದೆ, ಇಡೀ ಪ್ರದೇಶವು ದಟ್ಟ ಹೊಗೆಯಿಂದಾವೃತವಾಗಿತ್ತು. ಇಂದು ಮಧ್ಯಾಹ್ನ 3:00 ಗಂಟೆಯ ವೇಳೆಗೆ ಹಡಗು ಸಮುದ್ರದಲ್ಲಿ ಮುಳುಗಿತೆಂದು ಚೀನಾದ ಸಾಗರ ಆಡಳಿತ ಇಲಾಖೆ ತಿಳಿಸಿದೆ.