ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮ
ಮಂಗಳೂರು, ಜ. 15: ದ.ಕ.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕೊಡಿಯಾಲ್‌ಬೈಲ್ ಬೆಸೆಂಟ್ ಪದವಿ ಕಾಲೇಜಿನಲ್ಲಿ ಸೋಮವಾರ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಸರಕಾರ ಆಚರಿಸುವ ಪ್ರತಿ ಸಾಧಕರ ಜಯಂತಿಯ ಹಿಂದೆಯೂ ನಿರ್ದಿಷ್ಟ ಉದ್ದೇಶವಿದೆ. ಹಾಗಾಗಿ ಸಾಧಕರ ಜೀವನ ಕ್ರಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ವ್ಯಕ್ತಿಯ ಜೀವನವು ಶುದ್ಧ ನೀರಿನಂತೆ ಕ್ರೀಯಾಶೀಲತೆಯಿಂದ ಕೂಡಿದ್ದಾಗ ಮಾತ್ರ ಸಾಧನೆಯನ್ನು ನಿರೀಕ್ಷಿಸಬಹುದಾಗಿದೆ ಎಂದರು.
ಸಮಾಜದ ವಿಕೃತ ಚಿಂತನೆಗಳನ್ನು ದೂರಮಾಡುವುದೇ ಜಯಂತಿ ಆಚರಣೆಗಳ ಉದ್ದೇಶವಾಗಿದ್ದು, ಶಿವಯೋಗಿ ಸಿದ್ದರಾಮರು ಕೂಡ ತನ್ನ ವಚನಗಳಲ್ಲಿ ಅದನ್ನೇ ಬೋಧಿಸಿದ್ದರು ಎಂದು ಪ್ರದೀಪ್ ಕುಮಾರ್ ಕಲ್ಕೂರಾ ನುಡಿದರು.
ಶ್ರೀ ರಾಮಕೃಷ್ಣ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ಕಿಶೋರ್‌ಕುಮಾರ್ ರೈ ಶೇಣಿ ಉಪನ್ಯಾಸ ನೀಡಿ 12ನೇ ಶತಮಾನದ ಐವರು ವಚನಕಾರರಲ್ಲಿ ಸಿದ್ದರಾಮ ಕೂಡ ಒಬ್ಬರಾಗಿದ್ದು, ಬಾಲ್ಯದಲ್ಲಿ ಇವರು ಚಾಣಾಕ್ಷ ಅಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ದನ ಮೇಯಿಸಲು ಕಳುಹಿಸಿದ್ದರು. ಇವರು ಶ್ರೀಶೈಲಕ್ಕೆ ಹೋಗಿ ಬಂದ ಬಳಿಕ ಜ್ಞಾನಿಯಾಗಿ ಅಪಾರ ಶಿಷ್ಯ ವರ್ಗವನ್ನು ಗಳಿಸಿಕೊಂಡು, ಶಿವಯೋಗಿಯಾಗಿ ಹೊರಹೊಮ್ಮಿದರು ಎಂಬುದು ಅಧ್ಯಯನದಿಂದ ತಿಳಿಯುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್‌ಕುಮಾರ್ ಶೆಟ್ಟಿ ಪಿ, ಎಚ್.ಎಸ್.ಗುರುಮೂರ್ತಿ, ವಿದ್ಯಾರ್ಥಿನಿ ನಾಯಕಿ ಕಾವ್ಯಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಜನಪ್ರತಿನಿಧಿಗಳ ಗೈರು!
ಸರಕಾರದ ವತಿಯಿಂದ ಆಚರಿಸಲ್ಪಟ್ಟ ಈ ಜಯಂತಿಗೆ ಬಹುತೇಕ ಜನಪ್ರತಿನಿಧಿಗಳು ಗೈರು ಎದ್ದು ಕಾಣುತ್ತಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ ವಿಶೇಷ ಆಹ್ವಾನಿತರಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಮಾತ್ರ ಭಾಗವಹಿಸಿ ಗಮನ ಸೆಳೆದರು.