ಕಣ್ಣೀರ ಭಾಷೆಯನ್ನು ಅರ್ಥ ಮಾಡಿಕೊಳ್ಳಿ : ‘ಮೇಲ್ತೆನೆ’ಯ ವಾರ್ಷಿಕ ಸಭೆಯಲ್ಲಿ ಆಲಿಕುಂಞಿ ಪಾರೆ
ಮಂಗಳೂರು, ಜ.15: ಭಾಷೆ ಸಂವಹನದ ರಹದಾರಿ. ಸಾಹಿತ್ಯ ಸತ್ಯದ ಹುಡುಕಾಟಕ್ಕೆ ಮೂಲದಾರಿ. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇವು ಪರಸ್ಪರ ಪೂರಕವಾಗಿರುತ್ತದೆ. ಮಾತುಗಳು ಮಾತ್ರ ಭಾಷೆಯ ರೂಪಕವಲ್ಲ. ಕಣ್ಣೀರು ಕೂಡ ಭಾಷೆಯೇ ಆಗಿದೆ. ಮಗು ಅತ್ತಾಗ ಹಸಿವಾಗುತ್ತಿದೆಯೋ, ಅಂಗಾಂಗಕ್ಕೆ ನೋವಾಗುತ್ತಿದೆಯೋ ಎಂಬುದನ್ನು ತಿಳಿಯಲು ತಾಯಿಗೆ ಮಾತ್ರ ಸಾಧ್ಯ. ಅತ್ತ ಮಗುವಿನ ಆ ಕಣ್ಣೀರ ಭಾಷೆಯನ್ನು ಹೇಗೆ ಒಬ್ಬ ತಾಯಿಗೆ ಮಾತ್ರ ತಿಳಿಯಲು ಸಾಧ್ಯವೋ ಅದೇ ತಾಯಿಯ ಲಾಲನೆ ಪಾಲನೆಯಲ್ಲಿ ಬೆಳೆದ ಮಕ್ಕಳನ್ನು ಕಾರಣವಿಲ್ಲದೆ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಲಾಗುತ್ತದೆ. ಆವಾಗ ತಾಯಿಯ ಕಣ್ಣೀರು ಕೇವಲ ರೂಪಕ ಮಾತ್ರವಲ್ಲ, ಭಾಷೆಯೂ ಆಗಿದೆ. ಹಾಗಾಗಿ ಕಣ್ಣೀರ ಭಾಷೆಯನ್ನು ಸಹೃದಯಿಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ಹೇಳಿದರು.
ಸುಳ್ಯ ತಾಲೂಕಿನ ಕೊಲ್ಲಮೊಗರು ಗ್ರಾಮದ ತನ್ನ ತೋಟದ ಮನೆಯಲ್ಲಿ ರವಿವಾರ ನಡೆದ ‘ಮೇಲ್ತೆನೆ’ ಸಂಘಟನೆಯ ವಾರ್ಷಿಕ ಸಭೆ ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೊಲೆ, ಕೊಲೆಯತ್ನದ ಬಗ್ಗೆ ಕವನ ವಾಚಿಸಿದ ಅವರು ಕವಿ ತನ್ನ ಮನಸ್ಸಿನ ಭಾವನೆಗಳನ್ನು ಸಾಹಿತ್ಯದ ಮೂಲಕವಾದರೂ ಹೊರಹಾಕಿಯಾರು. ಆದರೆ, ಕೊಲೆಗೀಡಾದವರ ತಾಯಂದಿರು ತನ್ನ ನೋವನ್ನು ಕಣ್ಣೀರಿನ ಮೂಲಕ ಮಾತ್ರ ಹೊರಹಾಕಿಯಾರು. ಆ ಕಣ್ಣೀರು ಕೂಡ ಒಂದು ಭಾಷೆಯಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಪ್ರತೀಕಾರದ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು.
ಮೇಲ್ತೆನೆಯ ಬಶೀರ್ ಅಹ್ಮದ್ ಕಿನ್ಯ, ಇಸ್ಮಾಯೀಲ್ ಟಿ., ನಿಯಾಝ್ ಪಿ., ಹಂಝ ಮಲಾರ್, ರಫೀಕ್ ಪಾಣೇಲ, ಬಶೀರ್ ಕಲ್ಕಟ್ಟ ಕವನ ವಾಚಿಸಿದರು. ಮುಹಮ್ಮದ್ ಭಾಷಾ ಉಪಸ್ಥಿತರಿದ್ದರು. ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.