ಬಿಜೆಪಿಗರ ರಾಷ್ಟ್ರವಿರೋಧಿ ಹೇಳಿಕೆಗೆ ಖಂಡನೆ

Update: 2018-01-15 12:01 GMT

ಮಂಗಳೂರು, ಜ.15: ಭಾರತವು 2024ರಲ್ಲಿ ಸಂಪೂರ್ಣ ಹಿಂದೂ ರಾಷ್ಟ್ರವಾಗಲಿದೆ ಮತ್ತು 2025ರಲ್ಲಿ ಆರೆಸ್ಸೆಸ್‌ಗೆ 100 ವರ್ಷ ತುಂಬುವ ಸಂದರ್ಭ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಮುಸ್ಲಿಮರು ಮಾತ್ರ ಭಾರತದಲ್ಲಿ ಉಳಿಯಬಲ್ಲರು. ಒಪ್ಪದವರು ಇತರ ಯಾವುದೇ ರಾಷ್ಟ್ರದಲ್ಲಿ ಆಶ್ರಯ ಪಡೆಯುವ ಸ್ವಾತಂತ್ರ ಹೊಂದಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹಾಗೂ ಕನ್ನಡಿಗರು ಹರಾಮಿಗಳು ಎಂದ ಗೋವಾ ಸಚಿವ ವಿನೋದ್ ಪಾಲೇಕರ್‌ರ ಹೇಳಿಕೆಯನ್ನೂ ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಂಡರಾದ ಅಲಿ ಹಸನ್, ಅಬ್ದುಲ್ ಅಝೀಝ್ ಕುದ್ರೋಳಿ, ಯಾಸೀನ್ ಕುದ್ರೋಳಿ ಖಂಡಿಸಿದ್ದಾರೆ.

ದಿನಬೆಳಗಾದರೆ ಹಿಂದೂಗಳ ಹತ್ಯೆಯನ್ನು ಕಾದುನೋಡಿ ಅದರಿಂದ ಕೋಮು ರಾಜಕೀಯ ಮಾಡುವ, ಹತ್ಯೆಗೀಡಾದವರು ಸಂಘ ಪರಿವಾರದ ಕಾರ್ಯಕರ್ತರು ಎಂದು ಕೋಮು ಬಣ್ಣ ಹಚ್ಚಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಈ ಜನಪ್ರತಿನಿಧಿಗಳು 2024ಕ್ಕಿಂತ ಮುಂಚೆ ತಮ್ಮ ಮನೋಭಾವ ಬದಲಾಯಿಸದಿದ್ದರೆ ಮತದಾರರು ಶಾಶ್ವತವಾಗಿ ತಮ್ಮನ್ನು ಮನೆಗೆ ಅಟ್ಟಲಿದ್ದಾರೆ. ಕೋಮುವಿಷ ಬೀಜ ಬಿತ್ತುವ ಈ ಜನಪ್ರತಿನಿಧಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಆಗುತ್ತಿದ್ದು, ತಾವು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರದಲ್ಲಿದ್ದೇವೆ ಎಂಬುದನ್ನು ಮರೆತು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News