ಬೇಸಿಗೆಯಲ್ಲಿ ದಿನನಿತ್ಯ ನೀರು ಪೂರೈಕೆ ಸಾಧ್ಯತೆ: ಮೇಯರ್

Update: 2018-01-15 12:51 GMT

ಮಂಗಳೂರು, ಜ.15: ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ 6 ಮೀಟರ್‌ವರೆಗೆ ನೀರು ನಿಲುಗಡೆ ಯಶಸ್ವಿಯಾಗಿ ಮಾಡಲಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ನಗರದ ಜನತೆಗೆ ದಿನನಿತ್ಯ ನೀರು ಪೂರೈಕೆಯಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಅಣೆಕಟ್ಟಿನಲ್ಲಿ 6 ಮೀಟರ್‌ಗೆ ನೀರು ನಿಲುಗಡೆಯನ್ನು ಇಂದು ಮನಪಾದ ಕೆಲ ಸದಸ್ಯರು ಹಾಗೂ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

ಕಳೆದ ವರ್ಷ ತುಂಬೆ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ನಿಲುಗಡೆ ಮಾಡಲಾಗಿತ್ತು. ಅದರಿಂದಾಗಿ ಕಳೆದ ಬಾರಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದೀಗ ಈ ಬಾರಿ 6 ಮೀಟರ್‌ವರೆಗೆ ನೀರು ನಿಲುಗಡೆ ಮಾಡಿರುವುದರಿಂದ ತುಂಬೆ ಅಣೆಕಟ್ಟೆಯ ನೀರನ್ನು ಬೇಸಗೆಯ ವೇಳೆ ಸುಮಾರು 60 ದಿನಗಳವರೆಗೆ ದಿನನಿತ್ಯ ಪೂರೈಕೆ ಮಾಡಬಹುದಾಗಿದೆ. ಒಟ್ಟು 10.83 ಎಂಸಿಎಂ (ಮಿಲಿಯನ್ ಕ್ಯೂಬಿಕ್ ಲೀಟರ್) ನೀರು ಸಂಗ್ರಹವಾಗಿದೆ. ಮಕರ ಸಂಕ್ರಾತಿಯ ಶುಭ ದಿನದಂದು ಮಂಗಳೂರಿನ ಜನತೆಗೆ ಮನಪಾದಿಂದ ಈ ಕೊಡುಗೆಯನ್ನು ನೀಲಾಗುತ್ತಿದೆ ಎಂದವರು ಹೇಳಿದರು.

6 ಮೀಟರ್ ನೀರು ನಿಲುಗಡೆಯಿಂದ 50.88 ಎಕರೆ ಜಾಗ ಮುಳುಗಡೆ ಆಗಿದ್ದು, ಪ್ರಸ್ತುತ ಈ ಭೂಮಿಯ 37 ಮಂದಿ ಮಾಲಕರಿಗೆ ಪರಿಹಾರವಾಗಿ ವಾರ್ಷಿಕ 39 ಲಕ್ಷ ರೂ. ಬಾಡಿಗೆಯನ್ನು ನೀಡಲಾಗುತ್ತದೆ. ಮುಂದೆ ಮುಳುಗಡೆಯಿಂದ ಆಗುವ ನಷ್ಟ, ವೆಚ್ಚಗಳನ್ನು ಲೆಕ್ಕ ಹಾಕಿ ಸರಕಾರದ ಮೂಲಕ ಭೂಮಿಯ ಮಾಲಕರಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. 5 ಮೀಟರ್‌ವರೆಗೆ ನೀರು ನಿಲುಗಡೆಯಿಂದ 18 ಎಕರೆ 5 ಸೆಂಟ್ಸ್ ಭೂಮಿ ಮುಳುಗಡೆಯಾಗಿದ್ದು, 26 ಮಂದಿ ಭೂಮಾಲಕರಿಗೆ ಒಟ್ಟು 7 ಕೋಟಿ ರೂ. ಹಣ ಸರಕಾರದಿಂದ ಬಿಡುಗಡೆಯಾಗಿ ಬಹುತೇಕವಾಗಿ ವಿತರಣೆಯಾಗಿದೆ. ಕೆಲವರು ದಾಖಲೆಗಳ ಸಮಸ್ಯೆಯಿಂದ ಇನ್ನಷ್ಟೆ ಪರಿಹಾರವನ್ನು ಪಡೆಯಬೇಕಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಆಯುಕ್ತ ಮುಹಮ್ಮದ್ ನಝೀರ್, ಅಧಿಕಾರಿಳಾದ ನರೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಮುಳುಗಡೆಯಿಂದ ತೊಂದರೆ ಆಗಿದ್ದಲ್ಲಿ ಮಾಹಿತಿ ನೀಡಿದರೆ ಪರಿಹಾರ

6 ಮೀಟರ್ ನೀರು ಮುಳುಗಡೆಯಿಂದ ಸ್ಥಳೀಯರಿಗೆ ತೊಂದರೆಯಾಗುವ ಬಗ್ಗೆ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಸ್ಥಳೀ ಲಕ್ಷ್ಮೀ ನಾರಾಯಣ ಭಟ್ ಎಂಬವರ ರಸ್ತೆ ಮುಳುಗಡೆಯಾಗುವ ಭೀತಿಯಿದ್ದು, ಈವರೆಗೆ ಯಾವುದೇ ತೊಂದರೆ ಆಗಿಲ್ಲ.
ಅಬೂಬಕರ್ ಅವರ ಭೂಮಿಗೆ ಸ್ವಲ್ಪ ನೀರು ಹರಿದಿದ್ದು, ಬೇರೆ ಯಾವುದೇ ತೊಂದರೆ ಆಗಿಲ್ಲ. ಒಂದು ವೇಳೆ ನಮ್ಮ ಗಮನಕ್ಕೆ ಬಾರದೆ ಯಾರಿಗಾದರೂ ನೀರು ಮುಳುಗಡೆಯಿಂದ ತೊಂದರೆ ಆಗಿದ್ದಲ್ಲಿ ಗಮನಕ್ಕೆ ತಂದಲ್ಲಿ ಪರಿಹಾರದ ಕ್ರಮ ಮಾಡಲಾಗುವುದು.ಸ್ಥಳೀಯರು ನೀರು ನಿಲುಗಡೆಗೆ ಸಹಕಾರ ನೀಡಿರುವುದಕ್ಕೆ ತಾವು ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಮೇಯರ್ ಕವಿತಾ ಸನಿಲ್ ಹೇಳಿದರು.

ನೀರಿನ ಕೊರತೆ ಆಗದು- ಆದರೆ ಪೋಲು ಮಾಡದಿರಿ!
ಈ ಬಾರಿ ಮಂಗಳೂರು ಜನತೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದು. ಬೇಸಗೆಯಲ್ಲೂ ದಿನನಿತ್ಯ ನೀರು ಪೂರೈಕೆ ಮಾಡಲಾಗುವುದು. ಆದರೆ, ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸುವ ಮೂಲಕ ಮನಪಾದ ಜತೆ ಸಹಕರಿಸಬೇಕು.ಅನಗತ್ಯ ವಾಹನ ಶುಚಿಗೊಳಿಸುವುದು, ಕೈತೋಟ ಅಥವಾ ರಸ್ತೆಯ ಮಣ್ಣಿಗೆ ನೀರು ಹಾಯಿಸುವ ಮೂಲಕ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಸಾರ್ವಜನಿಕರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News