×
Ad

ಪ್ರಭುತ್ವದಿಂದ ಭಿನ್ನಮತ, ಪ್ರಶ್ನಿಸುವವರನ್ನು ಹತ್ತಿಕ್ಕುವ ಯತ್ನ : ಭಾಸ್ಕರ್ ರಾವ್

Update: 2018-01-15 19:20 IST

ಉಡುಪಿ, ಜ.15: ಇಂದು ಭಾರತದಲ್ಲಿ ಚಿಂತಕರು, ಯೋಚಿಸುವವರು ಹಾಗೂ ಪ್ರಶ್ನಿಸುವವರಿಗೆ ಬಹಳ ದೊಡ್ಡ ಅಪಾಯ ಎದುರಾಗಿದೆ. ಭಿನ್ನಮತ ವನ್ನು ವ್ಯಕ್ತಪಡಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಶ್ನೆ ಕೇಳುವುದನ್ನು ಮತ್ತು ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನಗಳು ಭಾರತ ಸಹಿತ ಇಡೀ ಪ್ರಪಂಚದಲ್ಲಿ ನಡೆಯುತ್ತಿವೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಅಂಕಣಕಾರ ಭಾಸ್ಕರ್ ರಾವ್ ಟೀಕಿಸಿದ್ದಾರೆ.

ಸೌಹಾರ್ದತೆಗಾಗಿ ಕರ್ನಾಟಕ ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ವತಿಯಿಂದ ಕರಾವಳಿ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಲಾದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಶ್ನೆಗಳನ್ನು ಕೇಳಿದರೆ ಐಟಿ, ಇಡಿ ದಾಳಿಗಳನ್ನು ನಡೆಸುವ ವಾತಾವರಣ ಈ ದೇಶದಲ್ಲಿ ಸೃಷ್ಠಿಯಾಗುತ್ತಿದೆ. ಚುನಾವಣೆಯ ಪೂರ್ವದಲ್ಲಿ ನೀಡಿದ ಭರವಸೆ ಗಳ ಬಗ್ಗೆಯೂ ಪ್ರಶ್ನಿಸುವಂತಿಲ್ಲ. ಇದು ನಮ್ಮ ದೇಶದ ದುಸ್ಥಿತಿ. ಸತ್ಯ ಹೇಳುವ ರನ್ನು ಎಲ್ಲ ಕಾಲದಲ್ಲೂ ಪ್ರಭುತ್ವ ತನ್ನ ಅಧಿಕಾರಕ್ಕಾಗಿ ಹತ್ತಿಕ್ಕುತ್ತ ಬಂದಿದೆ. ಪ್ರಶ್ನೆ ಯನ್ನು ಕೇಳುವವರು ಇರಲೇ ಬಾರದು ಎಂಬ ಸಿದ್ಧಾಂತದ ಕಡೆ ನಮ್ಮ ವ್ಯವಸ್ಥೆ ಹೋಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ಇಂದು ಜಗತ್ತಿನಲ್ಲಿ ಮೂರನೆ ಮಹಾಯುದ್ಧ ನಡೆಯಬೇಕಾದ ಅವಶ್ಯಕತೆ ಇಲ್ಲ. ಮುಕ್ತವಾಗಿ ಯುದ್ಧವನ್ನು ಮಾಡದೆ ಒಂದು ದೇಶ, ತಲೆಮಾರು, ಜನಾಂಗ, ಧರ್ಮವನ್ನು ಯಾವ ರೀತಿಯಲ್ಲಿ ಮಣಿಸಬಹುದು ಎಂಬುದನ್ನು ಇಂದಿನ ಪ್ರಭುತ್ವ ಕಂಡುಕೊಂಡಿದೆ. ಮನೆಗೆ ನೀರು, ವಿದ್ಯುತ್ ಸಿಗದಂತೆ ಮಾಡಿದರೆ ನಮ್ಮನ್ನು ಶರಣಾಗುವಂತೆ ಮಾಡಲಾಗುತ್ತಿದೆ. ನಿಷೇಧ ಹೇರುವ ಮೂಲಕ ಇಡೀ ದೇಶವನ್ನೇ ಮಣಿಸಿಬಿಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಗತ್ತಿನ ಇತಿಹಾಸದಲ್ಲಿ ವಿಶ್ವಪ್ರಸಿದ್ಧ ರಾಜಕೀಯ ಭಿನ್ನಮತೀಯ ಎಂದು ಗಾಂಧಿಯನ್ನು ಕರೆಯಲಾಗಿದೆ. ಗಾಂಧಿಯ ಹತ್ಯೆಯಾಗಿ 70ವರ್ಷಗಳ ಬಳಿಕವೂ ಗಾಂಧಿ ಎಂಬ ಶಬ್ದವು ಆದರ್ಶವಾದಿ, ಒಳ್ಳೆಯತನಕ್ಕೆ ಸಮಾನವಾಗಿ ಬಳಕೆ ಮಾಡಲಾಗುತ್ತಿದೆ. ಗಾಂಧಿ ತನ್ನ ಜೀವನದ ಉದ್ದಕ್ಕೂ ಯಾವುದೇ ಒಂದು ಸಿದ್ಧಾಂತಕ್ಕೂ ಬದ್ಧನಾಗಿರದೆ ತನಗೆ ಸರಿ ಕಂಡದ್ದನ್ನು ಹೇಳುತ್ತಿದ್ದ ಭಿನ್ನಮತಿಯ ಎಂದು ಅವರು ಹೇಳಿದರು.

ಎಲ್ಲ ಕಾಲಕ್ಕೂ ಸಲ್ಲುವಂತಹ ಮೌಲ್ಯಗಳನ್ನು ಪ್ರತಿನಿಧಿಸಿರುವ ಗಾಂಧೀಜಿ ಯಾವುದೇ ವರ್ಗಿಕರಣಕ್ಕೂ ಸಿಕ್ಕಿಲ್ಲ. ಮತೀಯವಾದಿ, ಕೋಮುವಾದಿಯಾಗದೆ ಶ್ರದ್ಧೆಯಿಂದ ಧಾರ್ಮಿಕನಾಗಿ ಉಳಿಯಲು ಸಾಧ್ಯ ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟ ಈ ಶತಮಾನದ ಮಹಾನ್ ವ್ಯಕ್ತಿ. ನಾವು ಎಲ್ಲಿಯವರೆಗೆ ಕೋಮುಸೌಹಾರ್ದತೆ, ಮತೀಯ ಸಾಮರಸ್ಯ ಹಾಗೂ ಸಮಾನತೆಗಾಗಿ ಹೋರಾಟ ನಡೆಸಬೇಕಾಗುತ್ತದೆಯೋ ಅಲ್ಲಿಯವರೆಗೆ ಗಾಂಧಿಯ ಕೈಯನ್ನು ಬಿಡುವಂತಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿದರು. ಅಧ್ಯಕ್ಷತೆಯನ್ನು ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್ ವಹಿಸಿದ್ದರು. ಸಮಿತಿಯ ಸಂಚಾಲಕ ಜಿ.ರಾಜಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಹುಸೇನ್ ಕೋಡಿಬೆಂಗ್ರೆ ಸ್ವಾಗತಿಸಿದರು. ಶ್ಯಾಮ್‌ರಾಜ್ ಬಿರ್ತಿ ವಂದಿಸಿದರು. ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

ಗಾಂಧಿಯ ಸತ್ಯ ತಿರುಚುವ ಯತ್ನ
ಗಾಂಧೀಜಿಯ ವಿಚಾರಗಳು ಸಾಯುವಷ್ಟು ದುರ್ಬಲ ಅಲ್ಲ. ಗಾಂಧಿಯನ್ನು ವಿರೋಧಿಸಿ ಗೋಡ್ಸೆಯ ಪೂಜಿಸುವವರು ಕೂಡ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಉದ್ದೇಶಕ್ಕಾಗಿ ಗಾಂಧಿ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಗಾಂಧಿ ಸತ್ಯ ಮತ್ತು ಅಹಿಂಸೆ ಮಾತ್ರವಲ್ಲದೆ ಸರಳತೆಗೆ ಹೆಚ್ಚು ಬೆಲೆಕೊಟ್ಟಿದ್ದರು. ಪ್ರಾಮಾಣಿಕತೆ, ಸತ್ಯ, ಸರಳತೆ, ಭಿನ್ನಮತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಆದರೆ ಇಂದು ಜಾಗತೀಕರಣದ ಜಾಹೀರಾತು ಪ್ರಪಂಚದಲ್ಲಿ ಗಾಂಧೀಜಿಯ ಸತ್ಯ ಎಂಬ ಕಲ್ಪನೆಯನ್ನೇ ತಿರುಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾಸ್ಕರ್ ರಾವ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News