×
Ad

ಪುತ್ತೂರು ಮಾಯ್ದೆ ದೇವುಸ್ ಚರ್ಚ್‍ನಲ್ಲಿ ಸಮುದಾಯದ ಹಬ್ಬ

Update: 2018-01-15 19:28 IST

ಪುತ್ತೂರು,ಜ.15: ದಯೆ, ಕರುಣೆ, ಕ್ಷಮೆ, ತ್ಯಾಗ, ಬಲಿದಾನ ಇದರ ಸಂಕೇತವಾಗಿರುವ ಪರಮಪ್ರಸಾದ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರ ಸಂಸ್ಕಾರವಾಗಿದ್ದು ಅದರಂತೆ ಕುಟುಂಬದಲ್ಲಿ ಪರಸ್ಪರ ವಿಧೇಯತೆ ಮತ್ತು ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಕುಟುಂಬವು ಕೊನೆವರೆಗೆ ಬಾಳುತ್ತದೆ ಅಲ್ಲದೆ ಕುಟುಂಬದ ಪಾವಿತ್ರ್ಯತೆಯನ್ನು ತೋರಿಸಿಕೊಡುತ್ತದೆ ಎಂದು ಮಾಯ್ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಪ್ರಾಂಶುಪಾಲರಾಗಿದ್ದು ಪ್ರಸ್ತುತ ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಆಡಳಿತ ನಿರ್ದೇಶಕ ಫಾ. ಮ್ಯಾಕ್ಸಿಂ ರೊಸಾರಿಯೋ ಹೇಳಿದರು.

ಅವರು ಮಾಯ್ದೆ ದೇವುಸ್ ಚರ್ಚ್‍ನಲ್ಲಿ ನಡೆಯುವ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ರವಿವಾರ ಸಂಜೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಪವಿತ್ರ ಪರಮ ಪ್ರಸಾದದ ಭ್ರಾತ್ವತ್ವ ರವಿವಾರ (ಕೊಂಪ್ರಿಚೊ ಆಯ್ತಾರ್)ದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಬೈಬಲ್ ವಾಚಿಸಿ ಸಂದೇಶ ನೀಡಿದರು. ಯೇಸುಕ್ರಿಸ್ತರು ಸಂಸ್ಥಾಪಿಸಿದ ಸಂಸ್ಕಾರವೇ ಪವಿತ್ರ ಪರಮ ಪ್ರಸಾದವಾಗಿದೆ. ಪವಿತ್ರ ಪರಮ ಪ್ರಸಾದದ ಆರಾಧನೆ ಸಮುದಾಯ ಸಂಘಟನೆಗೆ ಪ್ರೇರಣೆ ನೀಡುತ್ತದೆ. ಸಮುದಾಯದವರಲ್ಲಿ ಅಥವಾ ಇತರ ಸಮುದಾಯದಲ್ಲಿನ ಜನರಿಗೆ  ನಮ್ಮ ಮೇಲೆ ಉತ್ತಮ ಅಭಿಪ್ರಾಯ ವ್ಯಕ್ತವಾದಾಗ ಬಾಳಿನ ಉದ್ದಗಲಕ್ಕೂ ಉತ್ತಮ ಬಾಳು ಲಭ್ಯವಾಗುತ್ತದೆ. ನಮ್ಮ ಕುಟುಂಬದಲ್ಲಿ ನಾವು ಒಳ್ಳೆಯವರಾಗಿ, ಪ್ರೀತಿಯವರಾಗಿ ಜೀವಿಸಿದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಸಾಧ್ಯ. ಯಾರು ಪವಿತ್ರ ಪರಮ ಪ್ರಸಾದದಲ್ಲಿ ಭಕ್ತಿಪೂರ್ವಕವಾಗಿ ಭಾಗಿಗಳಾಗುತ್ತಾರೋ ಹಾಗೂ ಅರ್ಥೈಸಿಕೊಂಡು ಜೀವಿಸುತ್ತಾರೋ ಅವರಿಗೆ ಪರಮ ಪ್ರಸಾದದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದ ಅವರು ಈ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಸನ್ಮಾನಿಸುವುದರ ಮುಖಾಂತರ ಕ್ರೈಸ್ತರು ತಾವೂ ಕೂಡ ಅಂಥಹುದೇ ಜೀವನವನ್ನು ನಡೆಸಬೇಕೆಂಬುದಾಗಿ ನೆನಪಿಸಿಕೊಳ್ಳುತ್ತಾರೆ ಎಂದರು.

ಪವಿತ್ರ ಪರಮ ಪ್ರಸಾದದ ಸಂಸ್ಕಾರದಿಂದ ವೈಯಕ್ತಿಕವಾಗಿ, ಕುಟುಂಬದಲ್ಲಿ, ಚರ್ಚ್‍ನಲ್ಲಿ ಹಾಗೂ ಸಮಾಜದಲ್ಲಿ ಜೀವಿಸಲು ನೆರವಾಗುವುದಲ್ಲದೆ ಸಕ್ರಿಯ ಸಮುದಾಯವನ್ನು ಸಂಘಟಿಸಿ ಜೀವಂತ ಕ್ರಿಸ್ತರಿಗೆ ಸಾಕ್ಷಿಯಾಗಿ ಬದುಕಲು ಪ್ರೇರೇಪಣೆ ಒದಗಿಸುತ್ತದೆ. ಕುಟುಂಬದಲ್ಲಿ ಜೀವಿಸುವ ಸಂದರ್ಭದಲ್ಲಿ ಕಷ್ಟ-ಸಂಕಷ್ಟಗಳು ಎದುರಾದಾಗ ಕುಗ್ಗದೆ ಅವುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು. 

ಮಾಯ್ದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ಫಾ. ಆಲ್ಪ್ರೆಡ್ ಜಾನ್ ಪಿಂಟೊ, ಸಹಾಯಕ ಧರ್ಮಗುರು ಫಾ. ಪ್ರವೀಣ್ ಡಿ'ಸೋಜ ಡಿ'ಸೋಜ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ಫಾ. ಡಾ|ಆ್ಯಂಟನಿ ಪ್ರಕಾಶ್ ಮೊಂತೆರೋ, ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವಂ|ರಿತೇಶ್ ರೊಡ್ರಿಗಸ್, ವಂ|ಸುನಿಲ್ ಜಾರ್ಜ್ ಡಿ'ಸೋಜ, ಹಿರಿಯರಾದ ವಂ|ವಲೇರಿಯನ್ ಮಸ್ಕರೇನ್ಹಸ್ ಮಿತ್ತೂರು ಮತ್ತು ಸಾವಿರಾರು ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಲಾಯಿತು. ಕಥೋಲಿಕ್ ಕ್ರೈಸ್ತರು, ಧರ್ಮಗುರುಗಳು, ಧರ್ಮಭಗನಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು. ವೇದಿ ಸೇವಕರು, ಚರ್ಚ್ ಸ್ಯಾಕ್ರಿಸ್ಟಿಯನ್ ಬ್ಯಾಪ್ಟಿಸ್ಟ್ ತಾವ್ರೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ಮತ್ತಿತರರು ಉಪಸ್ಥಿತರಿದ್ದರು. 

ದಿವ್ಯ ಬಲಿಪೂಜೆ ಬಳಿಕ ಅಲಂಕೃತಗೊಂಡಿರುವ ತೆರೆದ ವಾಹನದಲ್ಲಿ ಪರಮ ಪ್ರಸಾದದ ಧಾರ್ಮಿಕ ಮೆರವಣಿಗೆ ಫಿಲೋಮಿನಾ ಕಾಲೇಜಿನ ವಠಾರದಿಂದ ಹೊರಟು ದರ್ಬೆ-ಕಲ್ಲಾರೆ-ಬಸ್‍ಸ್ಟ್ಯಾಂಡ್ ಮಾರ್ಗವಾಗಿ ಮಾಯ್ದೆ ದೇವುಸ್ ಚರ್ಚ್ ವಠಾರದಲ್ಲಿ ಸಮಾಪ್ತಿಗೊಂಡಿತು. ಭಕ್ತಿ ಮೆರವಣಿಗೆಯ ಬಳಿಕ ವಂ|ಮ್ಯಾಕ್ಸಿಂ ರೊಸಾರಿಯೋರವರು ಪರಮ ಪ್ರಸಾದದ ಆರಾಧನೆ ನಡೆಸಿ ಯೇಸುಕ್ರಿಸ್ತರ ಬೋಧನೆ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ದಿವ್ಯ ಬಲಿಪೂಜೆ ಹಾಗೂ ಭಕ್ತಿ ಮೆರವಣಿಗೆಯಲ್ಲಿ ಗಾಯನ ಮಂಡಳಿ ಸದಸ್ಯರಿಂದ ಯೇಸುಸ್ವಾಮಿಯ ಭಕ್ತಿ ಗೀತೆಗಳನ್ನು ಹಾದಿಯುದ್ದಕ್ಕೂ ಭಕ್ತಿಯಿಂದ ಹಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News